ವಿವಾದಾತ್ಮಕ ಪೋಸ್ಟ್: ಪೇದೆ ಅಮಾನತು
ತುಮಕೂರು, ನ.15: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಪೋಸ್ಟ್ ಮಾಡಿದ ಹೆಬ್ಬೂರು ಪೊಲೀಸ್ ಠಾಣೆಯ ಪೇದೆಯೋರ್ವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಪಿ.ಸಿ.ನಂಬರ್ 783 ಮಹೇಶ್ ಅಮಾನತ್ತಾದ ಪೇದೆ ಎಂದು ಗುರುತಿಸಲಾಗಿದೆ.
ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ಅಡುಗೆ ಅನಿಲ ವಿತರಿಸುವ ಸಂಬಂಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್ ಅವರ ಹೇಳಿಕೆಯೊಂದಕ್ಕೆ ಫೇಸ್‍ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಮಹೇಶ್, 'ಮುಸ್ಲಿಮರಿಗೆ ಸವಲತ್ತು ನೀಡಬೇಡಿ, ಅವರು ಬಿಜೆಪಿಗೆ ಮತ ಹಾಕಲ್ಲ' ಎಂದು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಸರಕಾರಿ ನೌಕರರಾಗಿ ಒಂದು ಪಕ್ಷ ಅಥವಾ ಒಂದು ಧರ್ಮದ ಪರವಾಗಿ ಜನರನ್ನು ನಿಕೃಷ್ಟವಾಗಿ ಕಾಣುವುದು ಅಪರಾಧ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ, ಪಿ.ಸಿ. ಮಹೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಡಾ.ದಿವ್ಯಾಗೋಪಿನಾಥ್ ತಿಳಿಸಿದ್ದಾರೆ.
Next Story





