ಐಎಫ್‌ಎಫ್‌ಐ ತೀರ್ಪುಗಾರರ ಸಮಿತಿಗೆ ಅಪೂರ್ವ ಅಸ್ರಾಣಿ ರಾಜೀನಾಮೆ

ಮುಂಬೈ, ನ.15: ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯ (ಐಎಫ್‌ಎಫ್‌ಐ)ದ ಭಾರತೀಯ ಪನೋರಮಾ ವಿಭಾಗದಿಂದ ಎರಡು ಸಿನೆಮಾಗಳನ್ನು ರದ್ದುಗೊಳಿಸಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯ ನಿರ್ಧಾರವನ್ನು ವಿರೋಧಿಸಿ, ತೀರ್ಪುಗಾರರ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸಿನೆಮಾ ಸಾಹಿತ್ಯ ಲೇಖಕ ಅಪೂರ್ವ ಅಸ್ರಾಣಿ ತಿಳಿಸಿದ್ದಾರೆ.
ತೀರ್ಪುಗಾರ ಸಮಿತಿಯ ಅಧ್ಯಕ್ಷರ ನಿಲುವನ್ನು ನಾನು ಬೆಂಬಲಿಸುತ್ತೇನೆ. ಕೆಲವು ಪ್ರಾಮಾಣಿಕ ಸಿನೆಮಾದ ಬಗ್ಗೆ ನಮಗಿರುವ ಜವಾಬ್ದಾರಿಯನ್ನು ಪೂರೈಸಲು ನಾವು ವಿಫಲವಾಗಿದ್ದು, ತೀರ್ಪುಗಾರರ ಸಮಿತಿ ಸದಸ್ಯನಾಗಿ ಮುಂದುವರಿಯಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಅಸ್ರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲಾಖೆಯ ನಿರ್ಧಾರವನ್ನು ವಿರೋಧಿಸಿ ಮಂಗಳವಾರವಷ್ಟೇ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಸುಜೊಯ್ ಘೋಷ್ ರಾಜೀನಾಮೆ ಸಲ್ಲಿಸಿದ್ದರು. ಗೋವಾದಲ್ಲಿ ನ.20ರಿಂದ 28ರವರೆಗೆ 48ನೇ ಅಂತಾರಾಷ್ಟ್ರೀಯ ಸಿನೆಮಾ ಉತ್ಸವ ನಡೆಯಲಿದೆ.
13 ಸದಸ್ಯರನ್ನು ಒಳಗೊಂಡಿರುವ ತೀರ್ಪುಗಾರರ ಸಮಿತಿಯು ಚಿತ್ರೋತ್ಸವದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿದ್ದ ಪಟ್ಟಿಯಿಂದ ಮರಾಠಿ ಸಿನೆಮಾ ‘ನ್ಯೂಡ್’ ಮತ್ತು ಮಲಯಾಳಂ ಸಿನೆಮಾ ‘ಎಸ್ ದುರ್ಗ’ ಚಿತ್ರವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಿತ್ತು. ಸೆಪ್ಟೆಂಬರ್ 21ರಂದು ಸಮಿತಿ ತನ್ನ ಪಟ್ಟಿಯನ್ನು ಇಲಾಖೆಗೆ ಸಲ್ಲಿಸಿತ್ತು. ಆದರೆ ಇಲಾಖೆ ಇದನ್ನು ವಿಳಂಬವಾಗಿ ಪ್ರಕಟಿಸಿದ್ದು , ಎರಡು ಸಿನೆಮಾಗಳ ಹೆಸರನ್ನು ಕೈಬಿಟ್ಟು ಪ್ರಕಟಿಸಿದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿ ‘ಎಸ್ ದುರ್ಗ’ ಸಿನೆಮಾದ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಮಾಹಿತಿ, ಪ್ರಸಾರ ಇಲಾಖೆಯ ಕಾರ್ಯದರ್ಶಿ, ಸಿನೆಮೋತ್ಸವದ ನಿರ್ದೇಶಕರು, ತೀರ್ಪುಗಾರರ ಮಂಡಳಿ ಅಧ್ಯಕ್ಷರನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ.







