ಬೆಂಗಳೂರು: ನ.16ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ತಿದ್ದುಪಡಿಗೆ ವಿರೋಧ

ಬೆಂಗಳೂರು, ನ.15: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ (ಕೆಪಿಎಂಇ) ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರ ಪ್ರತಿಭಟನೆ ಮುಂದುವರಿದಿದ್ದು, ನ.16ರಿಂದ ಬೆಂಗಳೂರಿನ ಹೊರರೋಗಿಗಳ ವಿಭಾಗದ ಸೇವೆ(ಒಪಿಡಿ) ಸಂಪೂರ್ಣ ಸ್ಥಗಿತವಾಗಲಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಇಂದಿನಿಂದ ಸಂಪೂರ್ಣವಾಗಿ ಹೊರ ರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದು, ಬೆಂಗಳೂರು ಶಾಖೆಯ ವೈದ್ಯರು ಮತ್ತು 30ಕ್ಕೂ ಹೆಚ್ಚಿನ ವೈದ್ಯಕೀಯ ಸಂಸ್ಥೆಗಳು ಬುಧವಾರ ಸಭೆ ನಡೆಸಿ, ಪ್ರತಿಭಟನೆಗೆ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಲು ಮುಂದಾಗಿವೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಎಂಇ ಸಂಘದ ನಿಯೋಜಿತ ಅಧ್ಯಕ್ಷ ಡಾ.ಜಯಣ್ಣ, ಕೆಪಿಎಂಇ ಕಾಯ್ದೆ ತಿದ್ದುಪಡಿ ಮರಣ ಶಾಸನವಾಗಲಿದೆ. ರಾಜ್ಯದ 6.30 ಕೋಟಿ ಜನರಿಗೆ ಇದರಿಂದ ಸಮಸ್ಯೆಯಾಗುತ್ತದೆ. ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬಂದಲ್ಲಿ ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳು ಮುಚ್ಚಲಿವೆ ಎಂದು ಹೇಳಿದರು.
ಶೇ.78ರಷ್ಟು ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವವರು ಖಾಸಗಿ ವೈದ್ಯರು. ತಿದ್ದುಪಡಿ ಕಾಯ್ದೆ ಮಂಡಿಸದಂತೆ ಮುಖ್ಯಮಂತ್ರಿ ಸಹಿತವಾಗಿ ಆರೋಗ್ಯ ಸಚಿವರಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಯಾವ ಮನವಿಗೂ ಸರಕಾರ ಸ್ಪಂದಿಸಿಲ್ಲ. ಐಎಂಎ ರಾಜ್ಯ ಘಟಕ ನಡೆಸುತ್ತಿರುವ ಹೋರಾಟಕ್ಕೆ ಬೆಂಗಳೂರು ಘಟಕದಿಂದ ಪೂರ್ಣ ಸಹಕಾರ ಹಾಗೂ ಬೆಂಬಲ ನೀಡಲಾಗಿದೆ ಎಂದರು.
ಒಳರೋಗಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ತುರ್ತು ಸೇವಾ ವಿಭಾಗ ಎಂದಿನಂತೆ ತೆರೆದಿರುತ್ತದೆ. ಸರ್ಜರಿ ಇರುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆ ಎಂದಿನಂತೆ ಇರುತ್ತದೆ. ಜ್ವರ, ಶೀತ, ಕೆಮ್ಮು ಸೇರಿದಂತೆ ದಿಢೀರ್ ಅಸ್ಪಸ್ಥಕ್ಕೆ ಯಾವುದೇ ಸೇವೆ ನೀಡುವುದಿಲ್ಲ. ತಿದ್ದುಪಡಿ ಕಾಯ್ದೆಗೆ ಸಂಘದಿಂದ ಆಕ್ಷೇಪಿಸಿರುವ 4 ಪ್ರಮುಖ ಅಂಶಗಳನ್ನು ಸರಕಾರ ಕೈಬಿಡುವರೆಗೂ ಒಪಿಡಿ ಸೇವೆ ರದ್ದು ಮಾಡಲಿದ್ದೇವೆ ಎಂದು ಎಚ್ಚರಿಸಿದರು.
'ವೋಟಿಗಾಗಿ ತಿದ್ದುಪಡಿ: ಆರೋಪ'
ಕೆಪಿಎಂಇ ವಿಧೇಯಕ ತಿದ್ದುಪಡಿಯನ್ನು ಜನರ ವೋಟು ಪಡೆಯಲೇ ಅನುಷ್ಠಾನ ಮಾಡುತ್ತಿರುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೇ ನಮ್ಮ ಬಳಿ ಹೇಳಿಕೊಂಡಿದ್ದಾರೆ. ರಾಜ್ಯ ಸರಕಾರ 2018ರ ವಿಧಾನಸಭಾ ಚುನಾವಣೆ ತಯಾರಿ ನಡೆಸುತ್ತಿದ್ದು, ಜನರನ್ನು ಭಾವನಾತ್ಮಕವಾಗಿ ಒಡೆದು ವೋಟು ಪಡೆಯಲು ಯತ್ನಿಸುತ್ತಿದೆ. ನಿವೃತ್ತ ನ್ಯಾ.ವಿಕ್ರಮ್‌ಜಿತ್ ಸೇನ್ ಅವರ ವರದಿ ಅನುಷ್ಠಾನ ಸಾಧ್ಯವಿಲ್ಲ.
-ಡಾ.ರವೀಂದ್ರ, ಪ್ರಧಾನ ಕಾರ್ಯದರ್ಶಿ, ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಮ್‌ಗಳ ಸಂಘ
ನ.16ರಿಂದ ಬಂದ್: ನ.16ರಿಂದ ಬೆಂಗಳೂರಿನ 600 ಆಸ್ಪತ್ರೆ, ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂಗಳ ಒಪಿಡಿ ಸೇವೆ ಸ್ಥಗಿತಗೊಳ್ಳಲಿದೆ. ಸುಮಾರು 22 ಸಾವಿರ ವೈದ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಚಾಮರಾಜಪೇಟೆಯ ಐಎಂಎ ಕೇಂದ್ರ ಕಚೇರಿಯ ಮುಂದೆಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.







