2011ರ ಸಾಲಿನ ಕೆಪಿಎಸ್ಸಿ ಹಗರಣ: ಪಿಐಎಲ್ ಮೇಲಿನ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು, ನ.15: ಪ್ರೊಬೇಷನರಿ ಹುದ್ದೆಗಳಿಗೆ 2011ರ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮೇಲಿನ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಈ ಕುರಿತಂತೆ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಪಿಐಎಲ್ ಹಾಗೂ ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಮುಕ್ತಾಯಗೊಳಿಸಿತು.
ವಿಚಾರಣೆ ವೇಳೆ ಅರ್ಜಿದಾರರಾದ ಡಾ.ಮೈತ್ರಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, 2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಎ ಮತ್ತು ಬಿ ವೃಂದದ ನೇಮಕಾತಿ ಹಗರಣದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ಅಂಶವನ್ನು ಪುನರುಚ್ಚರಿಸಿದರು.
ಕೆಪಿಎಸ್ಸಿ ಅಂದಿನ ಅಧ್ಯಕ್ಷ ಗೋನಾಳು ಭೀಮಪ್ಪ, ಸದಸ್ಯರು ಮತ್ತು ಅಭ್ಯರ್ಥಿಗಳ ಮಧ್ಯದ ದೂರವಾಣಿ ಸಂಭಾಷಣೆ, ಎಸ್‌ಎಂಎಸ್ ವಿನಿಮಯ ಹಾಗೂ ಅಂಕ ನೀಡಿಕೆಯಲ್ಲಿ ಪಕ್ಷಪಾತ ನಡೆದಿದೆ ಎಂಬ ಆರೋಪಗಳ ದಾಖಲೆಗಳನ್ನು ಹೊಳ್ಳ ಅವರು ನ್ಯಾಯಪೀಠಕ್ಕೆ ನೀಡಿದರು.
ಯಾವುದೇ ಆಕ್ಷೇಪಣೆ ಇಲ್ಲವೆ ಕೋರ್ಟ್ ಗಮನಕ್ಕೆ ತರುವ ಸಂಗತಿಗಳು ಏನಾದರೂ ಇದ್ದಲ್ಲಿ ಅರ್ಜಿದಾರರು ಅಥವಾ ಪ್ರತಿವಾದಿಗಳ ಪರ ವಕೀಲರು ಇನ್ನೆರಡು ದಿನಗಳಲ್ಲಿ ಲಿಖಿತವಾಗಿ ಸಲ್ಲಿಸಿ ಎಂದು ನ್ಯಾಯಪೀಠ ಸೂಚಿಸಿತು.







