ಎಫಿಶಿಯನ್ಸಿ ಬ್ರೈನ್ ಸಂಸ್ಥೆಯ ವಿರುದ್ಧ ವೈದ್ಯಕೀಯ ಸಂಘಕ್ಕೆ ದೂರು
ಮಂಗಳೂರು, ನ.15: ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸುವುದಾಗಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಪುತ್ತೂರಿನ ಎಫಿಶಿಯನ್ಸಿ ಬ್ರೈನ್ ಎಂಬ ಸಂಸ್ಥೆಯ ವಿರುದ್ಧ ಕರ್ನಾಟಕ ವೈದ್ಯಕೀಯ ಸಂಘ ಹಾಗೂ ಗ್ರಾಹಕ ವೇದಿಕೆಗೆ ದೂರು ನೀಡುವುದಾಗಿ ಭಾರತೀಯ ವಿಚಾರವಾದಿಗಳ ಸಂಘಟನೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನ ಈ ಸಂಸ್ಥೆಯು ಈಗಾಗಲೇ ನೂರಾರು ಮಕ್ಕಳಿಗೆ ಬುದ್ಧಿಮತ್ತೆ ಹೆಚ್ಚಿಸುವುದಾಗಿ ನಂಬಿಸಿ ತರಗತಿಗಳನ್ನು ನಡೆಸುತ್ತಿದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ವೈಜ್ಞಾನಿಕ ತಂಡವೊಂದು ಭೇಟಿ ನೀಡಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅಕ್ಟೋಬರ್‌ನಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ವರದಿಯನ್ನು ನೀಡಿತ್ತು. ಡಿಡಿಪಿಐ ಕೂಡ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರವನ್ನು ಬರೆದಿದ್ದರು. ಆದರೆ ಜಿಲ್ಲಾಧಿಕಾರಿ ಈವರೆಗೆ ಸಂಸ್ಥೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪ್ರೊ. ನರೇಂದ್ರ ನಾಯಕ್ ತಿಳಿಸಿದರು.
ಮಕ್ಕಳ ಕಣ್ಣಿಗೆ ಬಟ್ಟೆಕಟ್ಟಿದ ಬಳಿಕ ಬುದ್ಧಿಮತ್ತೆ ಹೆಚ್ಚಿಸುವುದನ್ನು ಕಲಿಸಲಾಗುತ್ತಿದೆ ಎಂದು ಸಂಸ್ಥೆಯು ವಂಚಿಸುತ್ತಿದೆ. ಬುದ್ಧಿಮತ್ತೆ ಹೆಚ್ಚಿಸುವ ಇಂತಹ ವಿಧಾನ ಇಲ್ಲ. ಈ ವಿಚಾರ ತಿಳಿದ ಕೆಲವು ಪೋಷಕರು ತಮ್ಮ ಮಕ್ಕಳನ್ನು ವಾಪಸ್ ಕರೆಸಿಕೊಳ್ಳುತ್ತಿದ್ದಾರೆ. ಆದರೆ ಸಂಸ್ಥೆಯು ಮೋಸದಿಂದ ತನ್ನ ಜಾಲವನ್ನು ವಿಸ್ತರಿಸುತ್ತಲಿದೆ. ಈಗಾಗಲೇ ಈ ರೀತಿಯ 120ಕ್ಕೂ ಅಧಿಕ ಬುದ್ಧಿಮತ್ತೆ ಹೆಚ್ಚಿಸುವ ಸಂಸ್ಥೆಗಳು ರಾಜ್ಯದ ಹಲವು ಕಡೆಗಳಲ್ಲಿ ಹುಟ್ಟಿಕೊಂಡಿವೆ. ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಸಂಸ್ಥೆಗಳನ್ನು ಶಾಶ್ವತ ಬಂದ್ ಮಾಡಬೇಕು ಎಂದು ಪ್ರೊ. ನರೇಂದ್ರ ನಾಯಕ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಜ್ಞ ವೈದ್ಯರಾದ ಡಾ.ಸಿ.ಆರ್.ಕಾಮತ್, ಕರ್ನಾಟಕ ನೇತ್ರತಜ್ಞರ ಸೊಸೈಟಿ ಅಧ್ಯಕ್ಷ ಡಾ.ಸಾಯಿ ಗಿರಿಧರ್ ಕಾಮತ್, ಡಾ.ಪಿ.ವಿ.ಭಂಡಾರಿ, ಮ್ಯಾಜಿಶಿಯನ್ ಜೂನಿಯರ್ ಶಂಕರ್ ಉಪಸ್ಥಿತರಿದ್ದರು.







