ದಿಲ್ಲಿ ಭಾರತದ ರಾಜಧಾನಿಯೇ ?
ಸುಪ್ರೀಂ ಕೋರ್ಟ್‌ನ್ನು ಕೇಳಿದ ಕೇಜ್ರಿವಾಲ್ ಸರಕಾರ

ಹೊಸದಿಲ್ಲಿ, ನ. 15: ದಿಲ್ಲಿಯನ್ನು ಭಾರತದ ರಾಜಧಾನಿ ಎಂದು ಭಾರತದ ಸಂವಿಧಾನದಲ್ಲಿ ಅಥವಾ ಇತರ ಸಂಸದೀಯ ಕಾನೂನಿನಲ್ಲಿ ಘೋಷಿಸಲಾಗಿದೆಯೇ ಎಂದು ದಿಲ್ಲಿಯ ಆಪ್ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇಳಿದೆ.
ರಾಷ್ಟ್ರೀಯ ರಾಜಧಾನಿಯ ಆಡಳಿತದಲ್ಲಿ ಯಾರು ಪ್ರಾಬಲ್ಯ ಹೊಂದಿದ್ದಾರೆ ಎಂಬ ಬಗೆಗಿನ ಮನವಿಯ ವಿಚಾರಣೆ ಸಂದರ್ಭ ಈ ಪ್ರಶ್ನೆ ಹುಟ್ಟಿಕೊಂಡಿತು.
ದಿಲ್ಲಿ ಸರಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಇಂದಿರಾ ಜೈಸಿಂಗ್, ದಿಲ್ಲಿಯನ್ನು ರಾಷ್ಟ್ರ ರಾಜಧಾನಿ ಎಂದು ಸಂವಿಧಾನ ಅಥವಾ ಯಾವುದಾದರೂ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಎ.ಕೆ. ಸಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠವನ್ನು ಪ್ರಶ್ನಿಸಿದರು.
ರಾಜಧಾನಿ ಎಂದು ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಿಲ್ಲ. ನಾಳೆ ಕೇಂದ್ರ ಸರಕಾರ ರಾಜಧಾನಿ ಬದಲಾಯಿಸುವ ತೀರ್ಮಾನ ತೆಗೆದುಕೊಳ್ಳಬಹುದು. ರಾಜಧಾನಿ ದಿಲ್ಲಿ ಎಂದು ಸಂವಿಧಾನ ಕೂಡ ಹೇಳುತ್ತಿಲ್ಲ. ಬ್ರಿಟಿಶರು ರಾಜಧಾನಿಯನ್ನು ಕೋಲ್ಕತಾದಿಂದ ದಿಲ್ಲಿಗೆ ವರ್ಗಾಯಿಸಿದರು ಎಂಬುದು ನಮಗೆ ಗೊತ್ತಿದೆ. ಆದರೆ, ದಿಲ್ಲಿಯನ್ನು ಭಾರತದ ರಾಜಧಾನಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.





