ನ.16ರಿಂದ ಕೆಎಂಸಿ ಮಣಿಪಾಲದಲ್ಲಿ ಹೊರರೋಗಿ ವಿಭಾಗ ಸೇವೆ ಬಂದ್
ಉಡುಪಿ, ನ.15: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ)ಅಧಿಸೂಚನೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆಯ ಕರ್ನಾಟಕ ವಿಭಾಗ ನ.16ರಿಂದ ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಅನಿರ್ಧಿಷ್ಟಾವಧಿಯವರೆಗೆ ಬಂದ್ ಮಾಡಲು ನಿರ್ಧರಿಸಿದ್ದು,ಅದರಂತೆ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆ, ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆ ಹಾಗೂ ಕಾರ್ಕಳದ ಡಾ.ಟಿಎಂಎಪೈ ಆಸ್ಪತ್ರೆಗಳ ಹೊರ ರೋಗಿ ವಿಭಾಗದ ಸೌಲಭ್ಯಗಳು ನ.16ರಿಂದ ಮುಂದಿನ ಸೂಚನೆಯವರೆಗೆ ಲಭ್ಯವಿರುವುದಿಲ್ಲ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಹಾಗೂ ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ.(ಕರ್ನಲ್) ಎಂ.ದಯಾನಂದ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗೆ ವಿಷಾದಿಸುತ್ತೇವೆ. ಆದರೆ ಆಸ್ಪತ್ರೆಯ ತುರ್ತುಚಿಕಿತ್ಸೆಗಳು ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಿಲ್ಲ: ಇಂದು ಸಂಜೆಯವರೆಗೆ ಅಜ್ಜರಕಾಡಿನ ಉಡುಪಿ ಜಿಲ್ಲಾಸ್ಪತ್ರೆ, ತಾಲೂಕು ಕೇಂದ್ರಗಳ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ಹಾಗೂ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ತಿಳಿಸಿದ್ದಾರೆ.
ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಹೊರ ರೋಗಿ ವಿಭಾಗವನ್ನು ಮುಚ್ಚಿದರೆ, ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದವರು ತಿಳಿಸಿದರು. ಈ ನಡುವೆ ತಮ್ಮ ಮುಂದಿನ ಕಾರ್ಯಯೋಜನೆಯ ಕುರಿತು ನಿರ್ಧರಿಸಲು ಉಡುಪಿ ಕರಾವಳಿಯ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು, ಆಯುರ್ವೇದ, ದಂತ ಚಿಕಿತ್ಸಾ ಆಸ್ಪತ್ರೆಗಳು ಹಾಗೂ ಖಾಸಗಿ ವೈದ್ಯರು ಇಂದು ರಾತ್ರಿ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.







