ವಿದ್ಯಾರ್ಥಿಗಳ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ: ಶ್ರೀಪಾದ್ ಭಟ್
ಬೆಂಗಳೂರು, ನ.15: ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿಗಳು ಸಮಾಜದ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಲು ಸಿದ್ಧರಿದ್ದಾರೆ. ಆದರೆ, ಅದಕ್ಕೆ ಸೂಕ್ತವಾದ ವೇದಿಕೆ ಇಲ್ಲವಾಗಿರುವುದಿಂದ ಯುವ ಜನತೆಯ ಅಭಿವ್ಯಕ್ತಿ ಸ್ವಾತಂತ್ರ ಮುನ್ನೆಲೆಗೆ ಬರುತ್ತಿಲ್ಲ ಎಂದು ಪ್ರಗತಿಪರ ಚಿಂತಕ ಶ್ರೀಪಾದ್ ಭಟ್ ಅಭಿಪ್ರಾಯಿಸಿದ್ದಾರೆ.
ಬುಧವಾರ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೆಂಗಳೂರು ವಿಶ್ವವಿದ್ಯಾಲಯದ ವೆಂಕಟಗಿರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರವಾದಿಗಳ ಹತ್ಯೆಗಳು ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮವಾಗಿ ಚಿಂತಿಸುತ್ತಾರೆ. ಹಾಗೂ ಆ ಕುರಿತು ತಮ್ಮ ಅಭಿಪ್ರಾಯವನ್ನು ಅಭಿವ್ಯಕ್ತಿಸಲು ಸದಾ ಸಿದ್ಧರಿರುತ್ತಾರೆ ಎಂಬುದಕ್ಕೆ ‘ವಿಚಾರವಾದಿಗಳ ಹತ್ಯೆಗಳು ಕುರಿತು ನಡೆದ’ ಪ್ರಬಂಧ ಸ್ಪರ್ಧೆಯೇ ಒಂದು ಉದಾಹರಣೆಯಾಗಿದೆ. ಈ ಪ್ರಬಂಧ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಅಭಿವ್ಯಕ್ತಿಸಿದ್ದಾರೆ ಎಂದು ಅವರು ವೆುಚ್ಚುಗೆ ವ್ಯಕ್ತಪಡಿಸಿದರು.
ಪ್ರಖರ ಪಂಡಿತರಾಗಿದ್ದರೆ ಮಾತ್ರವೇ ವಿಚಾರವಾದಿಗಳಾಗಿರಲು ಸಾಧ್ಯವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಕುರಿತು ಚಿಂತಿಸುವುದು ಹಾಗೂ ಪ್ರಶ್ನಿಸುವವರೆಲ್ಲರೂ ವಿಚಾರವಾದಿಗಳೇ ಆಗಿರುತ್ತಾರೆ. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿಗಳು ವಿಚಾರವಾದಿಗಳಾಗಿ ರೂಪಗೊಳ್ಳಲು ಹೆಚ್ಚಿನ ಅವಕಾಶವಿದೆ. ಅದಕ್ಕೆ ಬೇಕಾದ ಸೂಕ್ತ ವೇದಿಕೆಯನ್ನು ಕಲ್ಪಿಸಬೇಕಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಮೂರ್ತಿ ಮಾತನಾಡಿ, ದೇಶದಲ್ಲಿ ಶತಮಾನಗಳಿಂದ ಜಡ್ಡುಗಟ್ಟಿರುವ ಜಾತಿಶೋಷಣೆ, ಮೂಢ ನಂಬಿಕೆ ಹಾಗೂ ಪುರೋಹಿತಶಾಹಿ ವ್ಯವಸ್ಥೆ ಹಾಗೆಯೇ ಉಳಿಯುತ್ತಾ ಬಂದಿರುವುದು ಆತಂಕದ ಸಂಗತಿಯಾಗಿದೆ. ಇವತ್ತಿನ ಆಧುನಿಕ ಯುಗದಲ್ಲಿ ಈ ಅನಿಷ್ಟಗಳಿಗೆ ಸೂಕ್ತವಾದ ಪರಿಹಾರ ಹುಡುಕುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
10-15ವರ್ಷಗಳ ಕಾಲ ಶಿಕ್ಷಣ ಕಲಿತರೂ ಯಾವುದೇ ಪ್ರಯೋಜನವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದರಿಂದ ಗ್ರಾಮೀಣ ಹಾಗೂ ಮಧ್ಯಮ ವರ್ಗದ ಜನತೆ ಕೇವಲ ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಲು ಯುವ ಜನತೆ ಕಂಕಣ ಬದ್ಧರಾಗಬೇಕು ಎಂದು ಅವರು ಹೇಳಿದರು.
ವಿಚಾರವಾದಿಗಳ ಹತ್ಯೆಗಳು ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವಿದ್ಯಾ ಹೊಸಮನಿ, ಲಕ್ಷ್ಮಿ, ಮಹೇಶ್, ನಿಶಾ, ರೇಷ್ಮಾ, ಉಮಾರಿಗೆ ಬಹುಮಾನ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.







