ಗೋಸಾಗಾಟಗಾರನ ಮೃತದೇಹ ಛಿದ್ರಗೊಳಿಸಿರುವುದಾಗಿ ಒಪ್ಪಿಕೊಂಡ ಗೋರಕ್ಷಕರು
ಅಲ್ವಾರ್: ಗುಂಡಿಕ್ಕಿ ಹತ್ಯೆ

ಜೈಪುರ, ನ. 15: ಗೋವಿಂದನಗರದಲ್ಲಿ ಶುಕ್ರವಾರ ಗೋ ಸಾಗಾಟಗಾರನಾದ ಉಮ್ಮರ್ ಮೇಲೆ ದಾಳಿ ನಡೆಸಿರುವುದೇ ಅಲ್ಲದೆ, ಆತನ ಮೃತದೇಹವನ್ನು ಛಿದ್ರಗೊಳಿಸಿದ್ದೇವೆ ಎಂದು ಬಂಧಿತ ಇಬ್ಬರು ಗೋರಕ್ಷಕರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಛಿದ್ರಗೊಂಡ ಉಮ್ಮರ್‌ನ ಮೃತದೇಹ ಶುಕ್ರವಾರ ಬೆಳಗ್ಗೆ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಶನಿವಾರ ಸಂಜೆ ಉಮ್ಮರ್‌ನ ಕುಟುಂಬದವರು ಮೃತದೇಹದ ಗುರುತು ಹಿಡಿದ್ದರು.
ಉಮ್ಮರ್ ಹಾಗೂ ಆತನ ಇಬ್ಬರು ಸಹವರ್ತಿಗಳಾದ ತಾಹಿರ್ ಹಾಗೂ ಜಾವೇದ್ ಜಾನುವಾರು ಸಾಗಾಟಗಾರರು. ದನಗಳನ್ನು ಸಾಗಾಟ ಮಾಡಲು ಅವರು ಕಳವುಗೈದ ಪಿಕ್-ಅಪ್ ವಾಹನ ಬಳಸುತ್ತಿದ್ದರು. ಈ ಸಂದರ್ಭ ಗೋರಕ್ಷಕರು ನಡೆಸಿದ್ದ ದಾಳಿಯಲ್ಲಿ ಉಮ್ಮರ್ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಆರೋಪಿಗಳಾದ ರಾಮ್‌ವೀರ್ ಗುಜ್ಜರ್ ಹಾಗೂ ಭಗವಾನ್ ಸಿಂಗ್‌ರನ್ನು ಬಂಧಿಸಿದ್ದೇವೆ. ಹಲ್ಲೆ ನಡೆಸಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಇವರು ಹಲ್ಲೆ ಘಟನೆ ನಡೆದ ಗ್ರಾಮದ ಸಮೀಪದ ಗ್ರಾಮದ ನಿವಾಸಿಗಳು ಎಂದು ಅಲ್ವಾರ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೂಲ್ ಸಿಂಗ್ ರಾಣಾ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಮ್ಮರ್ ಮೃತದೇಹವನ್ನು ಛಿದ್ರಗೊಳಿಸಿರುವುದೇ ಅಲ್ಲದೆ, ರೈಲು ಅಪಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ರೈಲು ಹಳಿಯಲ್ಲಿ ತ್ಯಜಿಸಿರುವುದಾಗಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ರಾಣಾ ತಿಳಿಸಿದ್ದಾರೆ.
ಉಮ್ಮರ್, ತಾಹಿರ್ ಹಾಗೂ ಜಾವೇದ್ ಗೋವು ಕಳ್ಳರು. ಉತ್ತರಪ್ರದೇಶದಿಂದ ಕಳವುಗೈದ ಪಿಕ್-ಅಪ್ ವಾಹನವನ್ನು ಇದಕ್ಕಾಗಿ ಬಳಸುತ್ತಿದ್ದರು. ಮೋಟರ್‌ಸೈಕಲ್‌ನ ನಂಬರ್ ಪ್ಲೇಟ್ ಅನ್ನು ಇದಕ್ಕೆ ಬಳಸುತ್ತಿದ್ದರು. ತಾಹಿರ್ ಹಾಗೂ ಜಾವೇದ್‌ನನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ರಾಣಾ ತಿಳಿಸಿದ್ದಾರೆ.
ತಾಹಿರ್ ಹಾಗೂ ಉಮ್ಮರ್ ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಬೇಕಾದವರಾಗಿದ್ದಾರೆ. ಇವರ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳ ಬಗ್ಗೆ ವಿವರ ತಿಳಿಯಲು ಭರತ್‌ಪುರ ಹಾಗೂ ಹರ್ಯಾಣ ಪೊಲೀಸರಿಗೆ ಪತ್ರ ಪರೆದಿದ್ದೇವೆ ಎಂದು ಅಲ್ವಾರ್‌ನ ಪೊಲೀಸ್ ಅಧೀಕ್ಷಕ ರಾಹುಲ್ ಪ್ರಕಾಶ್ ತಿಳಿಸಿದ್ದಾರೆ.







