ಕ್ಯಾಲಿಫೋರ್ನಿಯದಲ್ಲಿ ಗುಂಡು ಹಾರಾಟ: 4 ಸಾವು

ಲಾಸ್ ಏಂಜಲಿಸ್, ನ. 15: ಕ್ಯಾಲಿಫೋರ್ನಿಯದ ಉತ್ತರದ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಮಕ್ಕಳು ಸೇರಿದಂತೆ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಳಿಕ ಹಂತಕನನ್ನು ಪೊಲೀಸರು ಗುಂಡು ಹಾರಿಸಿ ಕೊಂದರು ಎಂದು ಟೆಹಾಮ ಕೌಂಟಿ ಸಹಾಯಕ ಶರೀಫ್ ಫಿಲ್ ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದರು.
ಹಂತಕನು ಮಂಗಳವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ರಾಂಚೊ ಟೆಹಾಮ ರಿಸರ್ವ್‌ನಲ್ಲಿನ ಮನೆಯೊಂದರಲ್ಲಿ ತನ್ನ ಆಕ್ರಮಣವನ್ನು ಆರಂಭಿಸಿದನು. ಬಳಿಕ, ಒಂದು ಪ್ರಾಥಮಿಕ ಶಾಲೆಯೂ ಸೇರಿದಂತೆ ಈ ಪ್ರದೇಶದ ಇತರ ಸ್ಥಳಗಳಲ್ಲಿ ಗುಂಡು ಹಾರಿಸುತ್ತಾ ಸಾಗಿದನು.
ದಾಳಿಯಲ್ಲಿ ಯಾವುದೇ ಮಕ್ಕಳು ಮೃತಪಟ್ಟಿಲ್ಲ. ಆತನ ಕೃತ್ಯಕ್ಕೆ ಕಾರಣ ತಿಳಿದಿಲ್ಲವಾದರೂ, ಗೃಹ ಕಲಹ ಮತ್ತು ನೆರೆಕರೆಯವರೊಂದಿಗಿನ ಅತೃಪ್ತಿ ಸಾಮೂಹಿಕ ಹತ್ಯೆಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ನೆರೆಯವನ ಕಾರನ್ನು ಕದ್ದು ಅದರಲ್ಲಿ ಹಂತಕನು ಗುಂಡು ಹಾರಿಸುತ್ತಾ ಸಾಗಿದನು. ಶಾಲೆಗೆ ನುಗ್ಗುವ ಯತ್ನವನ್ನು ಆತ ಮಾಡಿದನಾದರೂ ಬೀಗ ಜಡಿದುದರಿಂದ ಅದು ಸಾಧ್ಯವಾಗಲಿಲ್ಲ.





