ಮುಂಬೈ ಅಗ್ನಿ ಶಾಮಕ ದಳಕ್ಕೆ ಮೊದಲ ಬಾರಿಗೆ 97 ಮಹಿಳೆಯರ ಸೇರ್ಪಡೆ

ಹೊಸದಿಲ್ಲಿ, ನ. 15: ಮುಂಬೈ ಅಗ್ನಿ ಶಾಮಕದಳ ಮೊದಲ ಬಾರಿಗೆ ಮಹಾರಾಷ್ಟ್ರ ಗ್ರಾಮೀಣ ಭಾಗದ 97 ಮಹಿಳೆಯರನ್ನು ಅಗ್ನಿ ಶಾಮಕ ಸಿಬ್ಬಂದಿಯನ್ನಾಗಿ ನೇಮಕ ಮಾಡಿದೆ.
145 ಸಿಬ್ಬಂದಿ ನೇಮಕಾತಿಯ ಒಂದು ಭಾಗವಾಗಿ ಈ ನೇಮಕಾತಿ ಮಾಡಲಾಗಿದೆ. ಮಹಾರಾಷ್ಟ್ರದ ಗ್ರಾಮೀಣ ಭಾಗವಾದ ನಾಸಿಕ್‌ನ ಸಿನ್ನಾರ್, ಕೊಂಕಣ್‌ನ ಸಿಂಧುದುರ್ಗಾ ಹಾಗೂ ಜಲ್ಗಾಂವ್‌ನಂತಹ ಪ್ರದೇಶಗಳಿಂದ ಈ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.
ಇದರೊಂದಿಗೆ ಮುಂಬೈ ಅಗ್ನಿಶಾಮಕ ದಳದ ಮಹಿಳಾ ಸಿಬ್ಬಂದಿ ಸಂಖ್ಯೆ 115ಕ್ಕೆ ಏರಿದೆ.
ನಗರದ ವಾಡಾಲಾ ಕಮಾಂಡ್ ಸೆಂಟರ್‌ನಲ್ಲಿರುವ ಹೊಗೆ ಉಪಕರಣಗಳ ಗ್ಯಾಲರಿಯಲ್ಲಿ ಈ ಮಹಿಳಾ ಸಿಬ್ಬಂದಿಗೆ ಅಗ್ನಿ ಶಮನದ ಬಗ್ಗೆ ತರಬೇತಿ ನಡೆಯಲಿದೆ. ಮುಂಬೈ ಅಗ್ನಿ ಶಾಮಕ ದಳಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಕ ಮಾಡಿರುವುದು ಇದೇ ಮೊದಲು ಎಂದು ಅಗ್ನಿ ಶಾಮಕ ದಳದ ಮುಖ್ಯಾಧಿಕಾರಿ ಪಿ. ರಹಾಂಗ್ಡಾಲೆ ತಿಳಿಸಿದ್ದಾರೆ.
ನಗರದಲ್ಲಿರುವ 34 ಅಗ್ನಿಶಾಮಕ ದಳದ ಸ್ಟೇಷನ್‌ಗಳಲ್ಲಿ ಈ ಮಹಿಳೆಯರನ್ನು ನಿಯೋಜಿಸಲಾಗುವುದು ಹಾಗೂ ಇವರ ಔಪಚಾರಿಕ ನಿಯೋಜನೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.





