'ಪದ್ಮಾವತಿ' ಚಿತ್ರ ಪ್ರದರ್ಶಿಸದಂತೆ ಆಗ್ರಹಿಸಿ ರಾಷ್ಟ್ರೀಯ ರಜಪೂತ ಕರಣಿ ಸೇನೆ ರ್ಯಾಲಿ

ಬೆಂಗಳೂರು, ನ.15: ರಜಪೂತ ಕ್ಷತ್ರಿಯ ರಾಣಿ ಪದ್ಮಾವತಿ ಇತಿಹಾಸವನ್ನು ತಿರುಚಲಾಗಿರುವ ‘ಪದ್ಮಾವತಿ’ ಹಿಂದಿ ಚಿತ್ರದ ಪ್ರದರ್ಶನ ಬೇಡ ಎಂದು ಆಗ್ರಹಿಸಿ ರಾಷ್ಟ್ರೀಯ ರಜಪೂತ ಕರಣಿ ಸೇನೆಯ ಆಶ್ರಯದಲ್ಲಿ ಸ್ವಾಭಿಮಾನ ಮೆರವಣಿಗೆಯನ್ನು ನಡೆಸಲಾಯಿತು.
ಬುಧವಾರ ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪದ್ಮಾವತಿ ಸಿನೆಮಾಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ರಜಪೂತ ಸಮುದಾಯದವರು ಮೆರವಣಿಗೆ ನಡೆಸಿ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರಣಿ ಸೇನೆಯ ರಾಷ್ಟ್ರೀಯ ಸಂಯೋಜಕಿಯಾದ ಹರಿಯಾಣದ ಕರ್ನಾಲ್ನ ಸಾಧ್ವಿ ದೇವ ಠಾಕೂರ್, ಪದ್ಮಾವತಿ ಚಿತ್ರದ ಟ್ರೈಲರ್‌ನಲ್ಲಿ ಬಿಂಬಿಸಿರುವ ದೀಪಿಕಾ ಪಡುಕೋಣೆಯಂತೆ ರಾಣಿ ರಜಪೂತ ಕ್ಷತ್ರಿಯರಾದ ರಾಣಿ ಪದ್ಮಾವತಿ ಇರಲು ಸಾಧ್ಯವೇ ಇಲ್ಲ. ನಾವುಗಳು ಮಾತಾ ಎಂದು ಪೂಜಿಸುವ ರಾಣಿ ಪದ್ಮಾವತಿಯು ಪೋಷಾಕಾಗಲಿ ತೋರಿಸಿರುವ ಪ್ರೇಮ ಕಥೆಯಾಗಲಿ ಆ ತರಹದಲ್ಲಿ ಇರಲು ಸಾಧ್ಯವೇ ಇಲ್ಲ ಎಂದರು.
ರಜಪೂತ ಕ್ಷತ್ರಿಯ ಮಹಿಳೆಯರು ಧರಿಸುವ ವಸ್ತ್ರವನ್ನು ರಜಪೂತ ಪೋಷಾಕು ಎಂದು ಕರೆಯಲಾಗುತ್ತದೆ. ಇದು ಕಾಲಿನ ಬೆರಳುಗಳು ಕಾಣಿಸದಂತೆ ಪೂರ್ತಿ ಮೈಯನ್ನು ಮುಚ್ಚಿರುತ್ತದೆ. ಆದರೆ, ದೀಪಿಕಾ ಪಡುಕೋಣೆ ಧರಿಸಿರುವ ಪೋಷಾಕಿನಲ್ಲಿ ಅವರ ಅಂಗಾಂಗ ಪ್ರದರ್ಶನವಾಗಿದೆ. ಇದು ಪದ್ಮಾವತಿಗೆ ಅವಮಾನ ಎಂದು ಕಿಡಿಕಾರಿದರು.
ಇವತ್ತಿನ ಸ್ವಾಭಿಮಾನ ಮೆರವಣಿಗೆ ಪ್ರತಿಭಟನೆಯ ಆರಂಭಿಕ ಹಂತವಾಗಿದೆ. ಡಿ.1 ರಂದು ಪದ್ಮಾವತಿ ಚಿತ್ರವನ್ನು ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.







