ಮಹಾದಾಯಿ ಯೋಜನೆಗೆ 249.45 ಕೋಟಿ ರೂ.ಖರ್ಚು: ಸಚಿವ ಪಾಟೀಲ್
ಬೆಳಗಾವಿ, ನ.14: ಮಹಾದಾಯಿ ಯೋಜನೆಯಡಿ ಪ್ರಸಕ್ತ ಸಾಲಿನ ಅಕ್ಟೋಬರ್‌ವರೆಗೆ 249.45 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸಸ್ಯ ಶ್ರೀಕಂಠೇಗೌಡ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಮಹಾದಾಯಿ ಯೋಜನೆಯು ಪ್ರಸ್ತುತ ನ್ಯಾಯಾಧೀಕರಣದ ಮುಂದಿದ್ದು, ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಸರಕಾರದಿಂದ ಮಾಡಲಾಗುತ್ತಿದೆ ಎಂದರು.
ಮಹಾದಾಯಿ ಯೋಜನೆಯ ಕುರಿತು ನ್ಯಾಯಾಧೀಕರಣದ ಮುಂದೆ ಸಮರ್ಥವಾಗಿ ವಾದ ಮಂಡನೆಗೆ ನುರಿತ ಕಾನೂನು ತಂಡ ರಚಿಸಿ, ತಾಂತ್ರಿಕ ಪರಿಣಿತರ ಸಾಕ್ಷಿಗಳನ್ನು ತಯಾರು ಮಾಡಿ ಯೋಜನೆಯ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ನ್ಯಾಯಾಧೀಕರಣದ ಪ್ರಕ್ರಿಯೆಗಳು ಜಾರಿಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಹಾದಾಯಿ ಜಲ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಸಕ್ತ ಸಾಲಿನ ಮೇ. 24 ಹಾಗೂ 30ರಂದು ಪತ್ರ ಬರೆದು ಜೂನ್‌ನಲ್ಲಿ ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಲು ಸೂಕ್ತ ದಿನಾಂಕವನ್ನು ನಿಗದಿಪಡಿಸಲು ಕೋರಿದ್ದರು ಎಂದು ಅವರು ತಿಳಿಸಿದರು.
ಈ ಸಂಬಂಧ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಜು.3ರಂದು ಪತ್ರ ಬರೆದು ಸೂಕ್ತ ದಿನಾಂಕವನ್ನು ನಿಗದಿಪಡಿಸಲು ಕೋರಿದ್ದಾರೆ. ಮಹಾದಾಯಿ ಜಲ ವಿವಾದ ನ್ಯಾಯಾಧೀಕರಣದ ಕಲಾಪಗಳು ನಿರಂತವಾಗಿ ನಡೆಯುತ್ತಿದ್ದು, ಕೇಂದ್ರ ಸರಕಾರದ ಅಧಿಸೂಚನೆ ಜು.24ರಂದು ನ್ಯಾಯಾಧೀಕರಣವು ಅಂತಿಮ ವರದಿಯನ್ನು ನೀಡುವ ದಿನಾಂಕವನ್ನು ಜು.21ರಿಂದ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.







