ಉಡುಪಿ: 14 ಮಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ
ಉಡುಪಿ, ನ.15: ಯಕ್ಷಗಾನ ಕಲಾರಂಗದ ಈ ಸಾಲಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ 14 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘವನ್ನು ಶ್ರೀವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಯಕ್ಷ ಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಗಣೇಶ ರಾವ್ ಅವರು ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ನ.19ರಂದು ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಡೆಯಲಿದೆ ಎಂದು ಅವರು ತಿಳಿಸಿದರು.
ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಂದೇಶ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ನಾಡೋಜ ಡಾ.ಜಿ. ಶಂಕರ್ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಕಲಾಂತರಂಗ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್‌ನ ಜಿಎಂ ನಾಗರಾಜ ರಾವ್ ಬಿ, ದಕ್ಷಿಣ ಕನ್ನಡದ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ, ಹಾದಿಗಲ್ಲು ಶ್ರೀ ಅಭಯ ಲಕ್ಷ್ಮೀನರಸಿಂಹ ದೇವಳದ ಧರ್ಮದರ್ಶಿ ಲಕ್ಷ್ಮೀನಾರಾಯಣ ಹಾದಿಗಲ್ಲು ಮತ್ತು ಕೊಪ್ಪದ ಉದ್ಯಮಿ ಬಿ.ಎನ್. ಮಹೇಶ್ ಅಡಿಗ ಭಾಗವಹಿಸಲಿದ್ದಾರೆ.
ಶ್ರೀವಿಶ್ವೇಶತೀರ್ಥ ಪ್ರಶಸ್ತಿ 50,000 ರೂ. ನಗದು ಪುರಸ್ಕಾರವನ್ನು ಹೊಂದಿದ್ದರೆ, ಉಳಿದೆಲ್ಲಾ ವೈಯಕ್ತಿಕ ಪ್ರಶಸ್ತಿಗಳು 20,000ರೂ. ನಗದು ಬಹುಮಾನವನ್ನು ಹೊಂದಿದೆ ಎಂದು ಕರಾರಂಗದ ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು.
ಹಿರಿಯ ಭಾಗವತ ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರಿಗೆ ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಪ್ರಶಸ್ತಿ, ಹಿರಿಯ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ ಪ್ರೊ.ಬಿ.ವಿ. ಆಚಾರ್ಯ ಸ್ಮರಣಾರ್ಥ, ಹಿರಿಯ ಹಿಮ್ಮೇಳ ವಾದಕ ಮೋಹನ ಬೈಪಡಿತ್ತಾಯರಿಗೆ ನಿಟ್ಟೂರು ಸುಂದರ್ ಶೆಟ್ಟಿ- ಮಹೇಶ್ ಡಿ.ಶೆಟ್ಟಿ ಸ್ಮರಣಾರ್ಥ, ಹಿರಿಯ ಹಿಮ್ಮೇಳ ವಾದಕ ಪೆರುವಾಯಿ ಕೃಷ್ಣ ಭಟ್‌ರಿಗೆ ಬಿ.ಜಗಜ್ಜೀವನ ಶೆಟ್ಟಿ ಸ್ಮರಣರ್ಥ, ಹಿರಿಯ ವೇಷಧಾರಿ ಕೈರಂಗಳ ಕೃಷ್ಣ ಮೂಲ್ಯ ಎ ಇವರಿಗೆ ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಿರಿಯ ಹಿಮ್ಮೇಳ ವಾದಕ ಜನ್ನಾಡಿ ಬಸವ ಬಳೆಗಾರರಿಗೆ ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ, ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ, ಹಿರಿಯ ವೇಷಧಾರಿ ಸತ್ಯನಾರಾಯಣ ವರದ ಹಾಸ್ಯಗಾರ ಕರ್ಕಿ ಇವರಿಗೆ ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ- ಬಾಗವತ ವಾದಿರಾಜ ಹೆಬ್ಬಾರ ಸ್ಮರಣಾರ್ಥ, ಭಾಗವತ ಪದ್ಯಾಣ ಗಣಪತಿ ಭಟ್‌ಗೆ ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಲಾಗುವುದು.
ಹಿರಿಯ ವೇಷಧಾರಿ ನಾರಾಯಣ ದೇವಾಡಿಗ ಚಿತ್ತೂರು ಇವರಿಗೆ ಶಿರಿಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ, ಹಿರಿಯ ವೇಷಧಾರಿ ಕೃಷ್ಣ ನಾಯ್ಕ ಹಳ್ಳಾಡಿ ಇವರಿಗೆ ಕೋಟ ವೈಕುಂಠ ಸ್ಮರಣಾರ್ಥ, ಹಿರಿಯ ಭಾಗವತ ಮಧುಕುಮಾರ್ ನಿಸರ್ಗ ಇವರಿಗೆ ಐರೋಡಿ ರಾಮ ಗಾಣಿಗ ಸ್ಮರಣಾರ್ಥ, ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿಗೆ ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ, ಹಿರಿಯ ಬಣ್ಣದ ವೇಷಧಾರಿ ಕೃಷ್ಣಯ್ಯ ಮಂಜಯ್ಯ ಶೆಟ್ಟಿ ಇವರಿಗೆ ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಗಣ್ಯವ್ಯಕ್ತಿಗಳ ಗೌರವಾರ್ಥ ಸ್ಥಾಪಿಸಲಾದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಕೋಳ್ಯೂರು ರಾಮಚಂದ್ರರಾವ್ ಗೌರವಾರ್ಥ ಹಿರಿಯ ವೇಷಧಾರಿ ಬೆಳಾಲು ಲಕ್ಷ್ಮಣಗೌಡರಿಗೆ ಹಾಗೂ ಶ್ರೀಮತಿ ಪ್ರಬಾವತಿ ವಿ. ಶೆಣೈ, ವಿ.ಯು.ವಿಶ್ವನಾಥ್ ಶೆಣೈ ಗೌರವಾರ್ಥ ಕಲಾಸಂಘಟಕ ಶುಂಠಿ ಸತ್ಯನಾರಾಯಣ ಭಟ್ ಇವರಿಗೆ ಪ್ರದಾನ ಮಾಡಲಾಗುವುದು. ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ನಿಕಟಪೂರ್ವ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಇವರಿಗೆ ನೀಡಲಾಗುವುದು ಎಂದು ಮುರಲಿ ಕಡೆಕಾರು ತಿಳಿಸಿದರು.
ನ.19ರಂದು ಪ್ರಶಸ್ತಿ ಪ್ರದಾನ ಸಮಾರಂಕ್ಕೆ ಮೊದಲು ಅಪರಾಹ್ನ 2:00ರಿಂದ ಬಡಗುತಿಟ್ಟಿನ ‘ರುಕ್ಮಿಣಿ ಸ್ವಯಂವರ’ ಹಾಗೂ ಸಮಾರಂದ ನಂತರ ತೆಂಕುತಿಟ್ಟಿನ ‘ವಿಶ್ವಾಮಿತ್ರ ಮೇನಕೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಎಂ. ಗಂಗಾಧರ ರಾವ್, ಎಸ್.ವಿ.ಭಟ್, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ ಹೆಗಡೆ, ಎಚ್.ಎನ್ ಶೃಂಗೇಶ್ ರಾವ್ ಮತ್ತು ಕೋಶಾಧಿಕಾರಿ ಮನೋಹರ್ ಕೆ. ಉಪಸ್ಥಿತರಿದ್ದರು.







