ಪೌರ ಕಾರ್ಮಿಕರ ಖಾಯಂಮಾತಿ: ಮಾತಿಗೆ ತಪ್ಪಿದ ಸರಕಾರ; ಆರೋಪ
ಉಡುಪಿ, ನ.15: ರಾಜ್ಯ ಸರಕಾರ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಗುತ್ತಿಗೆ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂ ಗೊಳಿಸುವುದಾಗಿ ಹೇಳಿದ ಸರಕಾರ ಇದೀಗ ಮಾತಿಗೆ ತಪ್ಪಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಕರ್ನಾಟಕ ರಾಜ್ಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ರಾಜ್ಯ ಪೌರಾಡಳಿತ ಸಚಿವ ಈಶ್ವರ ಬಿ.ಖಂಡ್ರೆ ಬೆಳಗಾವಿ ಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕೇವಲ 6 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿ ದುಡಿಯುತ್ತಿರುವ 35 ಸಾವಿರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯವೆಸಗಿದಂತಾಗಿದೆ ಎಂದು ಅವರು ಟೀಕಿಸಿದೆ.
ಈ ಮೂಲಕ ಎಲ್ಲರನ್ನು ಖಾಯಂ ಮಾಡುವುದಾಗಿ ರಾಜ್ಯ ಸಚಿವ ಸಂಪುಟ ದಲ್ಲಿ ಎರಡು ಬಾರಿ ಕೈಗೊಂಡಿರುವ ತೀರ್ಮಾನ, ಪೌರ ಕಾರ್ಮಿಕರಲ್ಲಿ ಮೂಡಿಸಿದ್ದ ಆಶಾಭಾವನೆಗೆ ಎಳ್ಳು ನೀರು ಬಿಟ್ಟಂತಾಗಿದೆ. ಸರಕಾರ ಮಾತಿಗೆ ತಪ್ಪಿದೆ ಎಂದು ಸಂಘ ಆರೋಪಿಸಿದೆ.
ರಾಜ್ಯದ ಹೈಕೋರ್ಟ್ ಹಾಗೂ ಕಲಬುರಗಿ ಪೀಠ ವಿಭಿನ್ನ ಮೊಕದ್ದಮೆಗಳಲ್ಲಿ ಸರಕಾರಕ್ಕೆ ನೀಡಿರುವ ನಿರ್ದೇಶನವನ್ನು ಇದರಿಂದ ಉಲ್ಲಂಘಿಸಿದಂತಾಗಿದೆ. ರಾಜ್ಯ ಸರಕಾರ ನಗರ ಸ್ಥಳೀಯ ಸಂಸ್ಥೆಗಳ ದಲಿತ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೌರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ 2016ರಲ್ಲಿ ಮಲ್ಲೇಶ್ವರಂ ನಡೆಸಿದ ಸಮ್ಮೇಳನದಲ್ಲಿ ಬಹಿರಂಗವಾಗಿ ಹೇಳಿದ್ದರು. ಆದರೆ ಪೌರಾಡಳಿತ ಸಚಿವರು ಖಾಲಿ ಇರುವ 6000 ಹುದ್ದೆಗಳನ್ನು ಮಾತ್ರ ನೇರ ನೇಮಕಾತಿ ಮೂಲಕ ತುಂಬುವುದಾಗಿ ಹೇಳುತ್ತಿರುವುದು ವಿರೋಧಾಭಾಸದ ಹೇಳಿಕೆ ಎಂದು ಸಂಘ ಟೀಕಿಸಿದೆ.
ರಾಜ್ಯ ಸರಕಾರ ನುಡಿದಂತೆ ಎಲ್ಲಾ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂ ಗೊಳಿಸಲು ಕ್ರಮ ವಹಿಸಲು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ಒತ್ತಾಯಿಸಿದೆ. ಅಲ್ಲದೇ ಸುಪ್ರೀಂ ಕೋರ್ಟ್ ತೀರ್ಪಿನಂತೆ ನಗರ ಸ್ಥಳೀಯಸಂಸ್ಥೆಗಳಲ್ಲಿ ಗುತ್ತಿಗೆ, ದಿನಗೂಲಿ, ಸಮಾನ ವೇತನ ಆಧಾರದಲ್ಲಿ ದುಡಿಯುತ್ತಿರುವ ಚಾಲಕರು, ವಾಟರ್‌ಮ್ಯಾನ್, ಎಲೆಕ್ಟ್ರೀಷಿಯನ್, ಕಂಪ್ಯೂಟರ್ ಆಪರೇಟರ್, ಕಛೇರಿ ಸಹಾಯಕರಿಗೆ ಖಾಯಂ ನೌಕರರಿಗೆ ನೀಡುವ ಸೇವಾ ಸೌಲಭ್ಯಗಳಲ್ಲಿ ವಿಸ್ತರಿಸಲು ಸಹ ಸಂಘ ರಾಜ್ಯ ಸರಕಾರವನ್ನು ಆಗ್ರಹಿಸಿದೆ.







