ಮಂಗಳೂರು ಪೊಲೀಸ್ ವಸತಿ ಗೃಹಗಳ ದುರಸ್ತಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ಬೆಳಗಾವಿ, ನ.15: ಮಂಗಳೂರು ನಗರದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ವಹಣೆ ಮತ್ತು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಶೀಘ್ರದಲ್ಲೇ 264 ವಸತಿ ಗೃಹಗಳ ನಿರ್ಮಾಣ ಮತ್ತು ಹೊಸ ವಸತಿ ಗೃಹಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಜೆ.ಆರ್.ಲೋಬೋ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ದುಸ್ತಿ ತಿಯಲ್ಲಿರುವ ಸಿಬ್ಬಂದಿ ವಸತಿ ಗೃಹಗಳ ಪರಿಶೀಲನೆಗೆ ಕೂಡಲೇ ಅಧಿಕಾರಿಗಳನ್ನು ಕಳುಹಿಸಲಾಗುವುದು. ಅಲ್ಲದೆ, ಅಗತ್ಯ ಹಣಕಾಸಿನ ನೆರವು ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಮಂಗಳೂರಿನಲ್ಲಿ 1,679 ಸಿಬ್ಬಂದಿ ಕಾಯೃ ನಿರ್ವಹಿಸುತ್ತಿದ್ದು, ಆ ಪೈಕಿ 542 ಮಂದಿಗೆ ವಸತಿ ಒದಗಿಸಲಾಗಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ವಸತಿ ಗೃಹಗಳ ಪೂರ್ಣಗೊಂಡರೆ ಶೇ.50ರಷ್ಟು ಸಿಬ್ಬಂದಿಗೆ ವಸತಿ ಸೌಲಭ್ಯ ದೊರೆಯಲಿದೆ. ಪ್ರಸಕ್ತ ವರ್ಷ ವಸತಿ ಗೃಹಗಳ ದುರಸ್ತಿಗೆ 52.55 ಲಕ್ಷ ರೂ.ಗಳನ್ನು ನೀಡಲಾಗಿದೆ. ಈ ಮೊತ್ತವನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪ ಮಾಡಿದ ಸದಸ್ಯ ಲೋಬೋ, ಪೋಲೀಸ್ ಸಿಬ್ಬಂದಿ ವಸತಿ ಗೃಹಗಳು ವಾಸಿಸಲು ಯೋಗ್ಯವಾಗಿಲ್ಲ. ಅತ್ಯಂತ ದುಸ್ಥಿತಿಯಲ್ಲಿದ್ದು, ಒಳಚರಂಡಿ ವ್ಯವಸ್ಥೆ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಲ್ಲ. ಈ ಬಗ್ಗೆ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.







