ಆರ್‍ಟಿಇ ರದ್ದುಗೊಳಿಸಲು ಶಾಸಕರ ಆಗ್ರಹ
ಬೆಳಗಾವಿ, ನ.15: ರಾಜ್ಯ ಸರಕಾರದ ವತಿಯಿಂದಲೇ ಪೂರ್ವ (ಪ್ರೀ ನರ್ಸರಿ) ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಶಿಕ್ಷಣಾ ಇಲಾಖಾ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‍ಸೇಠ್ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಸರಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದನ್ನು ಹೆಚ್ಚಿಸಲು ವಿವಿಧ ಸೌಲಭ್ಯಗಳನ್ನು ನೀಡಿ ಪ್ರಯತ್ನಿಸಿದರೂ ಯಶಸ್ವಿಯಾಗುತ್ತಿಲ್ಲ. ಇದಕ್ಕೆ ಕಾರಣ ಎಂದರೆ ಖಾಸಗಿ ಸಂಸ್ಥೆಗಳು ನಡೆಸುವ ಪೂರ್ವ ಪ್ರಾಥಮಿಕ ತರಗತಿಗಳು, ಇಂಗ್ಲಿಷ್ ಶಿಕ್ಷಣದ ಮೇಲೆ ಪೊಷಕರ ವ್ಯಾಮೋಹ ಹೆಚ್ಚುತ್ತಿರುವುದು. ಅದಕ್ಕಾಗಿ ನಮ್ಮ ಸರಕಾರವೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್‍ನ ಶಾಸಕ ವೈ.ಎಸ್.ವಿ.ದತ್ತ, ಇಷ್ಟೆಲ್ಲಾ ಏಕೆ ಹೇಳ್ತೀರಾ? ಮೊದಲು ಖಾಸಗಿ ಶಾಲೆಗಳನ್ನು ಪ್ರೋತ್ಸಾಹಿಸುವ ಆರ್‍ಟಿಇಯನ್ನು ರದ್ದು ಮಾಡಿ. ಸರಕಾರಿ ಶಾಲೆಗಳ ದುರಸ್ತಿಗೆ ಅನುದಾನ ನೀಡಲು ಸರಕಾರದ ಬಳಿ ಹಣ ಇಲ್ಲ. ಆದರೆ, 2 ಸಾವಿರ ಕೋಟಿ ರೂ.ಖರ್ಚು ಮಾಡಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲಾಗುತ್ತಿದೆ. ಮೊದಲು ಇದನ್ನು ಕೈಬಿಡಿ ಆರ್‍ಟಿಇಗೆ ನಮ್ಮ ಸಮ್ಮತಿ ಇಲ್ಲ ಎಂದು ಕೇಂದ್ರಕ್ಕೆ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗಲು ಆರ್‍ಟಿಇ ಒಂದು ಕಾರಣ. ಬಹುತೇಕ ಶಾಸಕರು ಆರ್‍ಟಿಇ ವಿರುದ್ಧ ಮಾತನಾಡಿದಾಗ, ನೀವು ನಿಮ್ಮ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತಿದ್ದೀರಿ ಎಂಬ ಬಗ್ಗೆ ಬಹಿರಂಗ ಪಡಿಸಿ ಎಂದು ಸಚಿವ ಸೇಠ್ ಗೆ ತಿರುಗೇಟು ನೀಡಿದರು.







