ಗಾಂಧೀಜಿ ಹತ್ಯೆ ಪ್ರಕರಣ: ಮರುತನಿಖೆಗೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆ

ಹೊಸದಿಲ್ಲಿ, ನ.15: ಮಹಾತ್ಮಾ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಪ್ರಧಾನ ಅಪರಾಧಿ ನಾಥೂರಾಮ್ ಗೋಡ್ಸೆ ಜೊತೆ ನಾರಾಯಣ್ ದತ್ತಾತ್ರೇಯ ಆಪ್ಟೆಯನ್ನೂ 1949ರ ನವೆಂಬರ್ 15ರಂದು ಗಲ್ಲಿಗೇರಿಸಲಾಗಿತ್ತು.
ಆದರೆ ಈ ಘಟನೆ ನಡೆದ 68 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಗಾಂಧೀಜಿ ಹತ್ಯೆಯಲ್ಲಿ ಅಪರಾಧಿ ಎಂದು ಪರಿಗಣಿತವಾಗಿರುವ ಆಪ್ಟೆಯ ಅಸ್ಮಿತೆಯ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದ್ದು ಮರುತನಿಖೆ ನಡೆಸಲು ಕೋರಲಾಗಿದೆ. ಮುಂಬೈ ಮೂಲದ ಅಭಿನವ್ ಭಾರತ್ ಸಂಸ್ಥೆಯ ಪರವಾಗಿ ಟ್ರಸ್ಟಿ ಪಂಕಜ್ ಫಡ್ನವೀಸ್ ಎಂಬವರು ಈ ಅರ್ಜಿ ಸಲ್ಲಿಸಿದ್ದಾರೆ. ಗಾಂಧಿ ಹತ್ಯೆಯ ಬಳಿಕ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಆಪ್ಟೆ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಇದನ್ನು ಸಮರ್ಥಿಸುವ ಯಾವುದೇ ಮಾಹಿತಿಯೂ ವಾಯುಪಡೆಯ ದಾಖಲೆಯಲ್ಲಿ ಇಲ್ಲ ಎಂಬುದನ್ನು ಮಾಜಿ ರಕ್ಷಣಾ ಸಚಿವರೇ ತಿಳಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಗಾಂಧಿ ಹತ್ಯಾ ಪ್ರಕರಣದ ಹಿಂದೆ ಇರುವ ಪಿತೂರಿಯನ್ನು ಬೆಳಕಿಗೆ ತರುವ ಉದ್ದೇಶದಿಂದ 1966ರಲ್ಲಿ ನೇಮಿಸಲಾಗಿದ್ದ ನ್ಯಾಯಮೂರ್ತಿ ಜೆ.ಎಲ್.ಕಪೂರ್ ತನಿಖಾ ಆಯೋಗದ ವರದಿಯಲ್ಲಿ ಆಪ್ಟೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು ಎಂದು ತಿಳಿಸಲಾಗಿದೆ. ಆದರೆ ಆಪ್ಟೆ ಭಾರತೀಯ ವಾಯಪಡೆಯ ಅಧಿಕಾರಿಗಳಾಗಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ಅಥವಾ ದಾಖಲೆ ಇಲ್ಲ ಎಂದು ಮಾಜಿ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ 2016ರ ಜನವರಿ 7ರಂದು ತಿಳಿಸಿರುವುದಾಗಿ ಫಡ್ನವೀಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಪಾರಿಕ್ಕರ್ ಬರೆದಿರುವ ಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಿದ್ದಾರೆ.
ಅಲ್ಲದೆ 1943-46ರ ಅವಧಿಯ ಗಜೆಟ್(ರಾಜ್ಯಪತ್ರ)ನಲ್ಲಿ ಕೂಡಾ ಆಪ್ಟೆ ವಾಯಪಡೆಯ ಅಧಿಕಾರಿ ಎಂಬ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಗಾಂಧೀಜಿ ಹತ್ಯೆ ಪ್ರಕರಣದ ಮರುತನಿಖೆ ನಡೆಸಬೇಕು. ಆಪ್ಟೆ, ಬ್ರಿಟಿಷ್ ಪಡೆ, 136ರ ಅಧಿಕಾರಿಯಾಗಿದ್ದರು ಎಂದು ನಂಬಲು ಸಾಕಷ್ಟು ಆಧಾರಗಳಿದ್ದು ಇದನ್ನು ತನಿಖೆಯಿಂದ ಸಾಬೀತುಪಡಿಸಬೇಕಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಗೋಡ್ಸೆ ಹೊರತುಪಡಿಸಿ, ಗಾಂಧಿ ಹತ್ಯೆಗೆ ನಾಲ್ಕನೇ ಗುಂಡು ಹಾರಿಸಲಾಗಿದೆಯೇ ಎಂಬುದನ್ನು ತನಿಖೆ ನಡೆಸಬೇಕು ಎಂದು ಫಡ್ನವೀಸ್ ಕೋರಿದ್ದಾರೆ. ಹಿರಿಯ ವಕೀಲ ಅಮರೇಂದರ್ ಶರಣ್‌ರನ್ನು ಈ ಅರ್ಜಿಯ ಪರಿಶೀಲನೆಗೆ ಸುಪ್ರೀಂಕೋರ್ಟ್ ನೇಮಿಸಿದೆ.
ಗಾಂಧಿ ಹತ್ಯೆ ಪ್ರಕರಣದ ಬಗ್ಗೆ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್‌ನಲ್ಲಿ 12 ಆರೋಪಿಗಳನ್ನು ಹೆಸರಿಸಲಾಗಿದ್ದು ಇವರಲ್ಲಿ ಓರ್ವ ಮಾಫಿ ಸಾಕ್ಷಿದಾರನಾಗಿ ಪರಿವರ್ತಿತನಾಗಿದ್ದ. ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೆ ಮೂವರನ್ನು ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಘೋಷಿಸಲಾಗಿತ್ತು.
ಉಳಿದ ಮೂವರಲ್ಲಿ ವಿನಾಯಕ ದಾಮೋದರ್ ಸಾವರ್ಕರ್‌ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಸಂಶಯದ ಲಾಭದ ಮೇರೆಗೆ ಬಿಡುಗಡೆಗೊಳಿಸಲಾಗಿತ್ತು. ನಾಥೂರಾಮ್ ಗೋಡ್ಸೆ ಹಾಗೂ ಆಪ್ಟೆಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಪೂರ್ವ ಪಂಜಾಬ್ ಹೈಕೋರ್ಟ್ ದೃಢೀಕರಿಸಿದ ಬಳಿಕ ಅಂಬಾಲ ಜೈಲಿನಲ್ಲಿ ಇವರಿಬ್ಬರನ್ನು 1949ರ ನ.15ರಂದು ಗಲ್ಲಿಗೇರಿಸಲಾಗಿತ್ತು.
ಮಹಾತ್ಮಾ ಗಾಂಧಿ ಆರಂಭಿಸಲು ನಿರ್ಧರಿಸಿದ್ದ ‘ಗಾಂಧಿ ಮತ್ತು ಜಿನ್ನ ಜನರಿಂದ ಜನರಿಗೆ ಸಂಪರ್ಕ’ ಅಭಿಯಾನವನ್ನು ತಡೆಯುವ ಗುಪ್ತ ಉದ್ದೇಶದಿಂದ ನಡೆಸಲಾಗಿದ್ದ ಈ ಹೇಯ ಕೃತ್ಯದ ಹಿಂದೆ ಇರುವ ಅಸಲಿ ಕೈವಾಡನ್ನು ಬಯಲಿಗೆಳೆಯುವ ಉದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.







