ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಧರಣಿ ಸತ್ಯಾಗ್ರಹ
ಬೆಳಗಾವಿ, ನ.15- ಕಬ್ಬಿಗೆ ಸೂಕ್ತ ಬೆಲೆ ನಿಗದಿ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ, ಫಸಲ್ ಬಿಮಾ ಯೋಜನೆ ಪರಿಹಾರದ ಹಣ ಕೂಡಲೇ ಪಾವತಿ, ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಎದುರು ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಬುಧವಾರ ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಕಾನೂನಾತ್ಮಕವಾಗಿ ಜಾರಿಗೆ ತರಬೇಕೆಂದು ಸರಕಾರವನ್ನು ಒತ್ತಾಯ ಮಾಡಿದ ರೈತರು, ರಾಜ್ಯ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ನೆರವಿಗೆ ಸ್ಪಂದಿಸುತ್ತಿಲ್ಲ. ಕೇವಲ ಕಾಪೆರ್ಪೊರೇಟ್ ಮತ್ತು ವಿಮಾ ಕಂಪೆನಿಗಳ ಹಿತಾಸಕ್ತಿಗೆ ಅನ್ವಯ ಕೆಲಸ ಮಾಡುತ್ತಿವೆ ಎಂದು ರೈತರು ಆರೋಪಿಸಿದರು.
ಕಳಸಾ ಬಂಡೂರಿ ಮಹದಾಯಿಗಾಗಿ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಕೇಂದ್ರ-ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಉತ್ತರ ಕರ್ನಾಟಕ ಭಾಗದ ಜನರ ಬಗ್ಗೆ ಕಾಳಜಿ ಇಲ್ಲ. ಫಸಲ್ ಭಿಮಾ ಯೋಜನೆಯಡಿ ಪ್ರೀಮಿಯಂ ತುಂಬಿರುವ ರೈತರಿಗೆ ಕೋಟ್ಯಂತರ ರೂ.ಪರಿಹಾರದ ಹಣ ಪಾವತಿ ಮಾಡದೆ ಉಳಿಸಿಕೊಂಡಿದ್ದು, ಈ ಪರಿಹಾರದ ಹಣವನ್ನು ರೈತರಿಗೆ ಜಮೆ ಮಾಡಬೇಕು. ಸಹಕಾರ ಸಂಘದಲ್ಲಿ ಉಳಿದಿರುವ ರೈತರ ಸಂಪೂರ್ಣ ಸಾಲಮನ್ನಾ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಮನವಿ ಸ್ವೀಕರಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಎಂದು ಭರವಸೆ ನೀಡಿದರು.
ಧರಣಿಯಲ್ಲಿ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಪರಿಷತ್ ಸದಸ್ಯ ಕಲ್ಯಾಣ್‍ರಾವ್ ಮುಚಳಂಬಿ, ಜಿಲ್ಲಾಧ್ಯಕ್ಷ ಈರಣ್ಣ ಪಾಟೀಲ್ ನೇತೃತ್ವ ವಹಿಸಿದ್ದರು.







