ಸಂತ್ರಸ್ತರಿಗೆ ಭೂ ದಾಖಲೆ ನೀಡಿ: ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್
ಶರಾವತಿ ಮುಳುಗಡೆ ಸಂತ್ರಸ್ತರ ಭೂ ಮಂಜೂರಾತಿ ಕುರಿತ ಸಮಾಲೋಚನಾ ಸಭೆ
ಶಿವಮೊಗ್ಗ, ನ.15: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಡಿನೋಟಿಫೈ ಆಗಿರುವ ಭೂಮಿಯನ್ನು ನಿಯಮಾನುಸಾರ ವಿಲೇ ಮಾಡಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಅಧಿಕಾರಿಗಳೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈಗಾಗಲೇ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಸರ್ವೇ ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕವಾಗಿ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, ಈ ಸರ್ವೇಯಲ್ಲಿ ವ್ಯತ್ಯಾಸವಿರುವ ಜಮೀನುಗಳನ್ನು ಸಂಬಂಧಿಸಿದ ಇಲಾಖೆಗಳು ಅಧಿಕಾರಿಗಳು ಜಂಟಿ ಸವೇರ್ ನಡೆಸಿ, ಆರ್‌ಟಿಸಿಯಲ್ಲಿ ವೈಯಕ್ತಿಕ ಮಾಲಕತ್ವ ನಮೂದಿಸಿ ಅರ್ಹರೆಂದು ಗುರುತಿಸಲಾದ ಫಲಾನುಭವಿಗಳಿಗೆ ಪಹಣಿ ವಿತರಿಸುವಂತೆ ಅವರು ಸೂಚಿಸಿದರು.
ಜಂಟಿ ಸರ್ವೇಯನ್ನು ನ.16ರಿಂದ 25ರೊಳಗಾಗಿ ಪೂರ್ಣಗೊಳಿಸಿ, ವರದಿ ನೀಡಿ, ಅರ್ಹರಿಗೆ ಭೂ ಮಂಜೂರಾತಿ ಪತ್ರ ನೀಡುವಂತೆ ಸೂಚಿಸಿದ ಅವರು, ಈಗಾಗಲೇ ನಡೆಸಿದ ಸರ್ವೇಯಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲದಿದ್ದಲ್ಲಿ ಅಂತಹವರಿಗೆ ಪಹಣಿಯಲ್ಲಿ ವೈಯಕ್ತಿಕ ಮಾಲಕತ್ವ ನಮೂದಿಸಿ, ಪಹಣಿ ನೀಡಬೇಕು. ಇದಕ್ಕೆ ಯಾವುದೇ ಇಲಾಖೆಯ ಅಡ್ಡಿಯಿಲ್ಲ. ಇನ್ನೂ ಮಂಜೂರಾತಿಯಾಗಿರುವ ಜಮೀನಿನಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದರೆ ಅವುಗಳನ್ನು ಜಂಟಿ ಸರ್ವೇಯಲ್ಲಿ ಗುರುತಿಸಿ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸಾಧ್ಯವಾದಷ್ಟು ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಆದಾಗ್ಯೂ ಸಮಸ್ಯೆ ಬಗೆಹರಿಯಲಾರೆಂಬುದು ಖಚಿತವಾದಲ್ಲಿ, ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದ್ದೆಂದು ಖಚಿತವಾದಲ್ಲಿ ಅವುಗಳನ್ನು ಹೊರತುಪಡಿಸಿ, ಉಳಿದ ಜಮೀನಿನ ಮಾಲಕರಿಗೆ ಪ್ರಮಾಣಪತ್ರ ನೀಡಬಹುದಾಗಿದೆ ಎಂದರು.
ಇದಲ್ಲದೇ ಸರ್ವೇಯಲ್ಲಿ ಗುರುತಿಸಿದಂತೆ ಸಮಪ್ರಮಾಣದಲ್ಲಿ ಭೂಮಿ ಇದ್ದು, ಸ್ಥಳ ವ್ಯತ್ಯಾಸವಿದ್ದಲ್ಲಿ ಅದನ್ನು ಪರಿಶೀಲಿಸಿ, ವಿಲೇವಾರಿಗೆ ಕ್ರಮ ಕೈಗೊಳ್ಳಬಹುದಾಗಿದೆ. ಸರ್ವೇ ಭೂಮಿಗೂ ಸಾಗುವಳಿ ಭೂಮಿಗೆ ತೀವ್ರಪ್ರಮಾಣದ ವ್ಯತ್ಯಾಸವಿದ್ದಲ್ಲಿ ಹಾಗೂ ಈ ಹಿಂದೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ವಾಸವಿದ್ದು, ಇದೀಗ ಭೂಸಂತ್ರಸ್ತರಾಗಿದ್ದು, ಅರಣ್ಯದಲ್ಲಿ ವಾಸವಿರುವವರ ಕುರಿತು ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಸರಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಎಚ್.ಟಿ. ಕೃಷ್ಣಮೂರ್ತಿ, ಸಾಗರ ಉಪವಿಭಾಗಾಧಿಕಾರಿ ನಾಗರಾಜ ಸಿಂಗ್ರೇರ್, ಜಿಲ್ಲಾ ಭೂಮಾಪನಾಧಿಕಾರಿ ನಾರಾಯಣ ಸ್ವಾಮಿ ಸೇರಿದಂತೆ ಶಿವಮೊಗ್ಗ, ಸಾಗರ ತಾಲೂಕುಗಳ ತಹಶೀಲ್ದಾರ್‌ರು, ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







