ಯುವತಿಯ ಮೊಬೈಲ್‌ಗೆ ಸಂದೇಶ: ಪ್ರಶ್ನಿಸಿದ ಮೂವರಿಗೆ ಚೂರಿ ಇರಿತ
ಶಿವಮೊಗ್ಗ, ನ. 15: ಯುವತಿಯ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿರುವುದನ್ನು ಪ್ರಶ್ನಿಸಿದಕ್ಕೆ ಒಂದೇ ಕುಟುಂಬದ ಮೂವರು ಯುವಕರ ಮೇಲೆ ನೆರೆಮನೆಯವರು ಹಲ್ಲೆ ನಡೆಸಿ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮದಲ್ಲಿ ವರದಿಯಾಗಿದೆ.
ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಆರೋಪದ ಮೇರೆಗೆ ಪ್ರಮುಖ ಆರೋಪಿ ಸುಮಂತ (24) ಹಾಗೂ ಆತನ ಕುಟುಂಬದವರಾದ ಕೃಷ್ಣಮೂರ್ತಿ (45) ಮತ್ತು ಸುನೀಲ (23) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಒಂದೇ ಕುಟುಂಬದ ನವೀನ್ (26), ಆನಂದ (27) ಹಾಗೂ ವಿಶ್ವ (28) ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನವೀನ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಬ್ ಇನ್‌ಪ್ೆಕ್ಟರ್ ಭರತ್‌ಕುಮಾರ್ ಮತ್ತವರ ಸಿಬ್ಬಂದಿ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾರಣವೇನು ?: ಆರೋಪಿ ಸುಮಂತನು, ನವೀನ್‌ರ ಸಹೋದರಿಯೋರ್ವರ ಪುತ್ರಿಯ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದ. ಈ ಬಗ್ಗೆ ನವೀನ್ ಹಾಗೂ ಅತನ ಮನೆಯವರು ಸುಮಂತನ ಬಳಿ ಆಗಮಿಸಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಸುಮಂತ ಹಾಗೂ ಇತರ ಈರ್ವರು ಆರೋಪಿಗಳು ನವೀನ್ ಹಾಗೂ ಆತನ ಮನೆಯ ಇತರೆ ಈರ್ವರ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದು ಗಾಯಗೊಳಿಸಿದ್ದರು ಎನ್ನ ಲಾಗಿದೆ.







