ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯ ಕಡತ ಒಪ್ಪಿಸಲು ಆದೇಶ
ಛತ್ತೀಸ್‌ಗಡ ಸರಕಾರಕ್ಕೆ ಸುಪ್ರೀಂ ಬಿಸಿ

ಹೊಸದಿಲ್ಲಿ,ನ.16: 2007ರಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ನ ಖರೀದಿಗೆ ಸಂಬಂಧಿಸಿದ ಮೂಲ ದಾಖಲೆಗಳುಳ್ಳ ಕಡತಗಳನ್ನು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಛತ್ತೀಸ್‌ಗಡದ ಬಿಜೆಪಿ ಸರಕಾರಕ್ಕೆ ಆದೇಶಿಸಿದೆ. ಈ ಖರೀದಿಯನ್ನು ಅಕ್ರಮವಾಗಿ ಮಾಡಲಾಗಿದೆ ಎಂದು ಅರ್ಜಿಯೊಂದು ಆಪಾದಿಸಿದೆ.
ಈ ಹೆಲಿಕಾಪ್ಟರ್‌ನ ಖರೀದಿಯಲ್ಲಿ ಯಾವುದೇ ಮೋಸ ನಡೆದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ನಾವು ಬಯಸಿದ್ದೇವೆ ಎಂದು ನ್ಯಾಯಪೀಠವು ಛತ್ತೀಸ್‌ಗಡ ಸರಕಾರದ ಪರ ವಕೀಲರಿಗೆ ತಿಳಿಸಿತು.
ಒಂದು ವಾರದೊಳಗೆ ಕಡತವನ್ನು ಸಲ್ಲಿಸುವಂತೆ ಮತ್ತು ಹೆಲಿಕಾಪ್ಟರ್ ಖರೀದಿಗೆ ನಾಗರಿಕ ವಾಯುಯಾನ ಪ್ರಧಾನ ಕಾರ್ಯದರ್ಶಿಗಳು ವ್ಯಕ್ತಪಡಿಸಿದ್ದ ಆಕ್ಷೆಪಣೆಗಳನ್ನು ಕಡೆಗಣಿಸಿದ್ದೇಕೆ ಎನ್ನುವುದನ್ನು ಪ್ರಮಾಣಪತ್ರದಲ್ಲಿ ಘೋಷಿಸುವಂತೆ ಸೂಚಿಸಿದ ನ್ಯಾಯಾಲಯವು, ಇದು ಅಗೌರವವಾಗಿತ್ತೇ ಅಥವಾ ಕಡೆಗಣನೆಯೇ ಎಂದು ಪ್ರಶ್ನಿಸಿತು. ಆಗಸ್ಟಾ ಬದಲು ಬೇರೆ ಹೆಲಿಕಾಪ್ಟರ್ ಖರೀದಿಸುವಂತೆ ಪ್ರಧಾನ ಕಾರ್ಯದರ್ಶಿಗಳು ಸರಕಾರಕ್ಕೆ ಸೂಚಿಸಿದ್ದರು.
2007-08ರಲ್ಲಿ ವಿಐಪಿಗಳ ಬಳಕೆಗಾಗಿ ಹೆಲಿಕಾಪ್ಟರ್ ಖರೀದಿ ಕುರಿತು ವಿಶೇಷ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ನಿರ್ದಿಷ್ಟವಾಗಿ ಮುಖ್ಯಮಂತ್ರಿ ರಮಣ ಸಿಂಗ್ ಅವರ ವಿರುದ್ಧ ತನಿಖೆಯನ್ನು ಕೋರಿರುವ ಅರ್ಜಿಯು, ಟೆಂಡರ್ ಮೋಸದಿಂದ ಕೂಡಿತ್ತು ಮತ್ತು ಹೆಲಿಕಾಪ್ಟರ್ ಖರೀದಿಗಾಗಿ ಆಡಳಿತ ಬಿಜೆಪಿಯು ಭಾರೀ ಕಮಿಷನ್ ಪಾವತಿಸಿತ್ತು. ಟೆಂಡರ್ ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು ಎಂದು ಆಪಾದಿಸಿದೆ. ರಮಣ ಸಿಂಗ್ ಅವರ ಪುತ್ರ ಅಭಿಷೇಕ್‌ಗೂ ಪನಾಮಾ ದಾಖಲೆಗಳಿಗೂ ಈ ವ್ಯವಹಾರವು ನಂಟು ಕಲ್ಪಿಸಿದೆ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ.







