ಐದು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ: ರಮೇಶ್ ಕುಮಾರ್
.jpg)
ಬೆಳಗಾವಿ, ನ.16: ವೈದ್ಯಕೀಯ ಕಾಲೇಜುಗಳಿಲ್ಲದ ರಾಜ್ಯದ ಐದು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ನಿರ್ಧರಿಸಲಾಗಿದ್ದು, ಅದರಂತೆ ತುಮಕೂರಿನಲ್ಲಿ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಆಡಳಿತ ಪಕ್ಷದ ಸದಸ್ಯ ರಫೀಕ್ ಅಹ್ಮದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವೈದ್ಯಕೀಯ ಕಾಲೇಜು ಇರಬೇಕೆಂಬುದು ಸರಕಾರದ ಉದ್ದೇಶ. ಆದರೆ, ಕೆಲವು ಕಾಲೇಜುಗಳಲ್ಲಿ ಅದು ಸಾಧ್ಯವಾಗದೇ ಇರುವಾಗ ಅಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕೆಂದು ಕಳೆದ ಬಜೆಟ್‍ನಲ್ಲಿ ಘೋಷಿಸಲಾಯಿತು. ಅದರಂತೆ ತುಮಕೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅರ್ಜಿ ಕರೆದಾಗ ಒಂದೇ ಒಂದು ಅರ್ಜಿ ಬಂತು. ಹಾಗಾಗಿ ಮತ್ತೊಮ್ಮೆ ಅರ್ಜಿ ಆಹ್ವಾನಿಸುತ್ತೇವೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ವೈದ್ಯಕೀಯ ಕಾಲೇಜು ಆರಂಭಕ್ಕೆ ಭಾರತೀಯ ವೈದ್ಯಕೀಯ ಪರಿಷತ್‍ಗೆ ಅರ್ಜಿಸಲ್ಲಿಸಲಾಗಿದೆ. ಕಟ್ಟಡ ನಿರ್ಮಾಣವೆಚ್ಚಕ್ಕೆ ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತಾವನೆಗೆ ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಭರವಸೆ ಇದೇ ವೇಳೆ ನೀಡಿದರು.





