ನವ ವಿವಾಹಿತೆ ಆತ್ಮಹತ್ಯೆ: ಕೊಲೆ ಆರೋಪ
ಬೆಂಗಳೂರು, ನ.16: ರಾಜಾಜಿನಗರದ ಡಿ ಬ್ಲಾಕ್‌ನಲ್ಲಿ ಬುಧವಾರ ರಾತ್ರಿ ನವ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಟನೆ ಸುಬ್ರಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಬ್ರಹ್ಮಣ್ಯ ನಗರದ ಡಿ ಬ್ಲಾಕ್‌ನ 5ನೆ ಕ್ರಾಸ್‌ನ ಪದ್ಮಿನಿ(25) ಎಂದು ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ.
ದಾವಣಗೆರೆ ಮೂಲದ ಪದ್ಮಿನಿಯನ್ನು 4 ತಿಂಗಳ ಹಿಂದೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು ಎನ್ನಲಾಗಿದೆ.
ವಿವಾಹದ ನಂತರ ಉದ್ಯೋಗಕ್ಕೆ ಹೋಗದೆ ಚಂದ್ರಶೇಖರ್ ಕಾಲ ಕಳೆಯುತ್ತಿದ್ದು, ಪದ್ಮಿನಿಯವರು ಮೊಬೈಲ್ ಅಂಗಡಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಿದ್ದರು. ಬುಧವಾರ ಕೆಲಸ ಮುಗಿಸಿಕೊಂಡು ಬಂದಿದ್ದ ಪದ್ಮಿನಿ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪದ್ಮಿನಿ ಅವರ ತಂದೆ ತಿಪ್ಪೇಸ್ವಾಮಿ ಅವರು ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ವಿರುದ್ಧ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯ ನಗರ ಠಾಣಾ ಪೊಲೀಸರು ಚಂದ್ರಶೇಖರನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ.







