‘ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ ವಿಧೇಯಕ’ ಮಂಡನೆ
‘ಕಂಬಳ-ಹೋರಿಗಳ ಓಟ’ ಅಭಾದಿತ
.jpg)
ಬೆಳಗಾವಿ, ನ.16: ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಹಾಗೂ ಉತ್ತೇಜಿಸಲು ಸಾಂಪ್ರದಾಯಿಕ ಕ್ರೀಡೆಗಳಾದ ‘ಕಂಬಳ’ ಮತ್ತು ‘ಹೋರಿಗಳ ಓಟ’ ಅಥವಾ ‘ಎತ್ತಿನಗಾಡಿ ಓಟದ ಸ್ಪಧೆ’ಗೆ ಅವಕಾಶ ಕಲ್ಪಿಸುವ ‘ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಎರಡನೆ ತಿದ್ದುಪಡಿ) ವಿಧೇಯಕ-2017’ನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಗುರುವಾರ ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಎ.ಮಂಜು ವಿಧೇಯಕವನ್ನು ಮಂಡಿಸಿದರು. ‘ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಎರಡನೆ ತಿದ್ದುಪಡಿ) ವಿಧೇಯಕ’ಕ್ಕೆ ಕೆಲ ಮಾರ್ಪಾಡು ಮಾಡುವಂತೆ ಕೇಂದ್ರ ಸರಕಾರ ಸಲಹೆ ನೀಡಿತ್ತು. ಅದನ್ನು ಪರಿಗಣಿಸಿ ಕೇಂದ್ರದ ಬದಲಾವಣೆಗಳನ್ನು ಅಳವಡಿಸಿಕೊಂಡು ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ನಿರಸನಗೊಳ್ಳಲಿರುವ ಕಾರಣ ಇದೀಗ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಸೂದೆ ತರಲಾಗಿದೆ.
ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನುಸರಿಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ದೇಶಿ ಕೋಣಗಳ ತಳಿಗಳನ್ನು ಉಳಿಸಿ-ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ‘ಕಂಬಳ’ ಮತ್ತು ದೇಶಿ ಜಾನುವಾರು ತಳಿಗಳನ್ನು ಉಳಿಸಿ-ಬೆಳೆಸುವ ದೃಷ್ಟಿಯಿಂದ ‘ಹೋರಿಗಳ ಓಟ’ ಅಥವಾ ‘ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇಶಿ ಜಾನುವಾರು ತಳಿಯ ಸಂರಕ್ಷಣೆಗಾಗಿ ಅವುಗಳ ರಕ್ಷಣೆ, ಭದ್ರತೆ ಮತ್ತು ಯೋಗಕ್ಷೇಮವನ್ನೂ ಖಚಿತಪಡಿಸಿಕೊಳ್ಳುವುದಕ್ಕೆ ಕಂಬಳ, ಹೋರಿಗಳ ಓಟ ಅಥವಾ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸಲು ಅನುವು ಮಾಡಿಕೊಡಲಾಗಿದೆ.







