ಪತ್ರಿಕಾ ಸ್ವಾತಂತ್ರ್ಯಕ್ಕೆ ಸರಕಾರ ಬದ್ಧ : ಮೋದಿ
ರಾಷ್ಟ್ರೀಯ ಪತ್ರಿಕಾ ದಿನಾಚರಣೆ
.jpg)
ಹೊಸದಿಲ್ಲಿ, ನ.16: ಕೇಂದ್ರ ಸರಕಾರ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಂದರ್ಭ ಪತ್ರಕರ್ತರಿಗೆ ಶುಭಾಷಯ ಸಲ್ಲಿಸಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ಸ್ವತಂತ್ರ ಪತ್ರಿಕಾರಂಗವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಹಾಗೂ ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಮಹತ್ವದ ಪಾತ್ರವನ್ನು ಮಾಧ್ಯಮಗಳು ನಿಭಾಯಿಸುತ್ತಿವೆ ಎಂದು ತಿಳಿಸಿದ್ದಾರೆ.
ವಿವಿಧ ರಾಷ್ಟ್ರೀಯ ಹಾಗೂ ಜಾಗತಿಕ ವಿದ್ಯಮಾನಗಳನ್ನು ವರದಿಮಾಡುವ ನಿಟ್ಟಿನಲ್ಲಿ ನಿರಂತರ ಕಾರ್ಯನಿರ್ವಹಿಸುವ ಮಾಧ್ಯಮದವರ, ಅದರಲ್ಲೂ ವಿಶೇಷವಾಗಿ ವರದಿಗಾರರು ಹಾಗೂ ಛಾಯಾಚಿತ್ರಗ್ರಾಹಕರ ಕಠಿಣ ಪರಿಶ್ರಮ ಶ್ಲಾಘನೀಯವಾದುದು ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಧ್ವನಿ ಇಲ್ಲದವರ ಧ್ವನಿಯಾಗುವ ಕಾರ್ಯದಲ್ಲಿ ಮಾಧ್ಯಮದವರ ಪಾತ್ರ ಅದ್ಭುತವಾಗಿದೆ. ಕಳೆದ ಮೂರು ವರ್ಷಗಳಲ್ಲಿ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಮಾಧ್ಯಮಗಳು ಶಕ್ತಿ ತುಂಬಿದ್ದು ಸ್ವಚ್ಛತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಿವೆ ಎಂದು ಮೋದಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಮೊಬೈಲ್ ಫೋನ್ ಮೂಲಕ ಸುದ್ದಿ ಪಡೆಯುವ ಪರಿಸ್ಥಿತಿಗೆ ನಾವು ಸಾಕ್ಷಿಯಾಗಿದ್ದೇವೆ. ಮಾಧ್ಯಮಗಳು 125 ಕೋಟಿ ಭಾರತೀಯರ ಕೌಶಲ್ಯ, ಶಕ್ತಿ ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ವೇದಿಕೆಯಾಗಬೇಕು ಎಂದು ಮೋದಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.





