ಸೌಹಾರ್ದಯುತ ಪರಿಹಾರ; ಜಿಲ್ಲಾಧಿಕಾರಿ ಭರವಸೆ

ಮಣಿಪಾಲ, ನ.17: ಕಾರ್ಮಿಕರು ಹಾಗೂ ಸುಝ್ಲನ್ ಆಡಳಿತ ಮಂಡಳಿ ನಡುವಿನ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿದು ಮುಂದಿನ ವಾರದಲ್ಲಿ ಕಂಪೆನಿ ಪುನರಾರಂಭಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇಂದು ಸಂಜೆ ಮಣಿಪಾಲದ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇಂದು ಪಡುಬಿದ್ರಿಯಲ್ಲಿ ಎಲ್ಲರೊಂದಿಗೆ ನಡೆಸಿದ ಮಾತುಕತೆಗಳಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಕಂಪೆನಿಯಲ್ಲಿ ಉತ್ಪಾದನೆ ತುಂಬಾ ಕಡಿಮೆ ಇದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೊನೆಯ ಹಂತದಲ್ಲಿ ಕಂಪೆನಿ ಕಠಿಣ ನಿಲುವು ತಳೆಯಬೇಕಾಯಿತು. 641 ಎಕರೆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ, ವಿಶ್ವದಲ್ಲಿಯೇ ಅತೀ ದೊಡ್ಡದಾದ ಈ ಕಂಪೆನಿ ಮುಚ್ಚುವುದರಿಂದ ಅವರಿಗೇನು ಲಾಭವಿಲ್ಲ. ಕಂಪೆನಿ ನಡೆಯಲೇ ಬೇಕಾಗಿದೆ ಎಂದರು.
ಮತ್ತೊಂದು ಕಡೆ ಕಾರ್ಮಿಕರು ತಮ್ಮದೇ ಆದ ರೀತಿಯ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಕಂಪೆನಿ ಮುನ್ಸೂಚನೆ ಕೊಡುವುದಕ್ಕೋಸ್ಕರ ಈ ರೀತಿ ಮಾಡಿರಬಹುದು. ತನ್ನ ಕ್ರಮವನ್ನು ಪುನರಾವಲೋಕಿಸಿ ಆಡಳಿತ ಮಂಡಳಿ ಮುಂದಿನ ವಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಕಂಪೆನಿ ಅಧಿಕಾರಿ ಗಳು ಭರವಸೆ ನೀಡಿದ್ದಾರೆ. ಕಂಪೆನಿ ಪುನರಾರಂಭಗೊಳ್ಳುವ ನಂಬಿಕೆ ಇದೆ ಎಂದರು.





