ಖುದ್ದು ಹಾಜರಾಗಲು ಕಾಲೇಜಿನ ಪ್ರಾಂಶುಪಾಲರಿಗೆ ಹೈಕೋರ್ಟ್ ನಿರ್ದೇಶನ
ವಿಕ್ಟೋರಿಯಾ ಆಸ್ಪತ್ರೆಯ ಖಾಲಿಯಿರುವ ನೇಮಕಾತಿ ಹುದ್ದೆಗಳ ವಿಚಾರ

ಬೆಂಗಳೂರು, ನ.16: ವಿಕ್ಟೋರಿಯಾ ಆಸ್ಪತ್ರೆ ಆವರಣದ ಸರಕಾರಿ ದಂತ ಆರೋಗ್ಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿಯಿರುವ ವಿವಿಧ ವೈದ್ಯಾಧಿಕಾರಿಗಳ ಹುದ್ದೆ ಹಾಗೂ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಸರಕಾರದ ಅನುಮೋದನೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸ್ಪಷ್ಟೀಕರಣ ನೀಡಲು ನ.20ರಂದು ವಿಚಾರಣೆಗೆ ಖುದ್ದು ಹಾಜರಾಬೇಕು ಎಂದುಗ ಲೇಜಿನ ಕಾಪ್ರಾಂಶುಪಾಲ ಡಾ.ಡಿ.ಆರ್.ಪೃಥ್ವಿರಾಜ್ ಮತ್ತು ರಾಜ್ಯ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕಾಲೇಜಿನಲ್ಲಿರುವ ಆರ್ಥೋದಾಂಟಿಕ್ಸ್ ವಿಭಾಗದ ಉಪನ್ಯಾಸಕರು, ಆ ಹುದ್ದೆ ಸಂಬಂಧ ವಿಕಲ ಚೇತನ ಅಭ್ಯರ್ಥಿಗಳಿಗೆ ಮೀಸಲು ನೀಡಲು ಮತ್ತು ತಮ್ಮನ್ನು ದಂತ ಆರೋಗ್ಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ದಂತ ಅಧಿಕಾರಿಯಾಗಿ ನೇಮಕ ಮಾಡಲು ರಾಜ್ಯ ಸರಕಾರಕ್ಕೆ ಆದೇಶಿಸುವಂತೆ ಕೋರಿ ಡಾ.ಎಸ್.ಜೆ.ರಾಜಲಕ್ಷ್ಮೀ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠವು, ಅಧಿಕಾರಿಗಳ ಖುದ್ದು ಹಾಜರಾತಿಗೆ ನಿರ್ದೇಶಿಸಿತು.
ಅರ್ಜಿ ಕಳೆದ ಬಾರಿ ವಿಚಾರಣೆಗೆ ಬಂದಾಗ ಕಾಲೇಜಿನ ಪ್ರಾಂಶುಪಾಲರು ಮೆಮೊ ಸಲ್ಲಿಸಿ, ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಸಂಬಂಧ ಮೀಸಲು ನೀಡುವ ಬಗ್ಗೆ ವಿವರಣೆ ಕೋರಿ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಅ.4ರಂದು ಸರಕಾರವು ವಿವರಣೆ ನೀಡಿದೆ. ಇದರ ಬೆನ್ನಲ್ಲೇ ನೇಮಕಾತಿಗೆ ಅನುಮೋದನೆ ನೀಡಲು ಸರಕಾರಕ್ಕೆ ಕೋರಲಾಗಿದೆ. ಸರಕಾರ ಅನುಮೋದನೆ ನೀಡಿದ ಕೂಡಲೇ ಕಾನೂನು ಪ್ರಕಾರ ನೇಮಕಾತಿಗೆ ಅಗತ್ಯ ಕ್ರಮ ಜರುಗಿಸಲಿದೆ ಎಂದು ತಿಳಿಸಿದ್ದರು. ಇದನ್ನು ಆಕ್ಷೇಪಿಸಿದ್ದ ಸರಕಾರದ ಪರ ವಕೀಲರು, ರಾಜ್ಯ ಸರಕಾರವು ಅ.4ರಂದೇ ವಿವಿಧ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದೆ. ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಹೀಗಾಗಿ, ಖಾಲಿಹುದ್ದೆಗಳನ್ನು ನೋಟಿಫೈ ಮಾಡಿ, ನೇಮಕಾತಿ ನಡೆಸಬಹುದು ಎಂದು ತಿಳಿಸಿದರು.
ಇದರಿಂದಾಗಿ ಈ ಕುರಿತು ವಿವರಣೆ ನೀಡಲು ವಿಚಾರಣೆಗೆ ಖುದ್ದು ಹಾಜರಾಗಲು ಕಾಲೇಜಿನ ಪ್ರಾಂಶುಪಾಲರು ಹಾಗೂ ಡಿಪಿಎಆರ್ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.
ನ್ಯಾಯಾಂಗ ನಿಂದನೆ ಎಚ್ಚರಿಕೆ: ಅರ್ಜಿದಾರಳಾದ ಡಾ.ಜಯಲಕ್ಷ್ಮೀ ಪರ ತಾಯಿ ಡಾ.ಶೋಬಾ ಅವರು ವಾದ ಮಂಡಿಸುತ್ತಿದ್ದಾರೆ. ಆದರೆ, ಕಾಲೇಜು ಸಂಸ್ಥೆಯು ಸಲ್ಲಿಸಿದ ಮೆಮೊ ಬಗ್ಗೆ ವಿಚಾರಣೆ ನಡೆಸುತ್ತಿರುವಾಗ ಡಾ.ಶೋಭಾ ಅವರು ಕೋರ್ಟ್ ಪ್ರಕ್ರಿಯೆಗೆ ಅಡ್ಡಿಪಡಿಸಿ, ಜೋರು ಧ್ವನಿಯಲ್ಲಿ ಮಾತನಾಡುತ್ತಾ ನ್ಯಾಯಪೀಠಕ್ಕೆ ಬೆದರಿಕೆ ಹಾಕಿದ್ದಾರೆ.
ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ತಮ್ಮ ಬಗ್ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಗೆ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಅಶಿಸ್ತಿನಿಂದ ಕೂಡಿದ ವರ್ತನೆ ಸರಿಯಲ್ಲ. ಮತ್ತೆ ಇದೇ ವರ್ತನೆ ಪುನರಾವರ್ತಿತವಾದರೆ ನ್ಯಾಯಾಂಗ ನಿಂದನೆ ನೋಟಿಸ್‌ನೀಡಲಾಗುವುದು ಎಂದು ಎಚ್ಚರಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರು, ಪ್ರಕರಣದಲ್ಲಿ ಉಭಯ ಕಡೆಯ ಕಕ್ಷಿದಾರರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಡಾ.ಶೋಭಾ ಅವರ ಅಶಿಸ್ತು ನಡಾವಳಿಯನ್ನು ಈ ಬಾರಿ ಕ್ಷಮಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು.







