ಯೋಧ ನವತಿಂದರ್ ಸಿಂಗ್ ಹತ್ಯೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಬೆಂಗಳೂರು, ನ.16: ಕರ್ತವ್ಯನಿರತ ಯೋಧ ನವತಿಂದರ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಬೆಂಗಳೂರಿನ ಸಿಸಿಎಚ್ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಸತೀಶ್ ಯಾನೆ ಕುಮಾರ್, ಅಂತೋಣಿ ಯಾನೆ ಗುರು ಹಾಗೂ ಪ್ರದೀಪ್ ಯಾನೆ ಕುಮಾರ್ ನಾಯಕ್ ಎಂಬವರು ಶಿಕ್ಷೆಗೆ ಗುರಿಯಾದವರು ಎಂದು ಮೂಲಗಳು ತಿಳಿಸಿದ್ದು, 2010ನೆ ಸಾಲಿನ ನ.7ರಂದು ನಡೆದಿದ್ದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್.ಸಪ್ಪಣ್ಣವ್ ಅವರು ಈ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, 10 ಸಾವಿರ ದಂಡ ಪಾವತಿಸಲು ಅಪರಾಧಿಗಳು ವಿಫಲರಾದರೆ ಹೆಚ್ಚುವರಿಯಾಗಿ 6 ತಿಂಗಳ ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣ ಸಂಬಂಧ ಪಬ್ಲಿಕ್ ಪ್ರಾಸಿಕ್ಯೂಟರ್ ಚನ್ನಪ್ಪಜಿ.
ಹರಸೂರ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನಲೆ: ಬೆಂಗಳೂರಿನ ಸಿಟಿ ರೈಲ್ವೇ ನಿಲ್ದಾಣದಲ್ಲಿ ಅಪರಾಧಿಗಳು ಸಾರ್ವಜನಿಕರಿಂದ ನಗದು, ಗಡಿಯಾರ ಕಿತ್ತುಕೊಂಡಿದ್ದರು. ಇದನ್ನು ಗಮನಿಸಿದ ಆರ್‌ಪಿಎಫ್ ಪೇದೆ ಎಸ್.ಎಸ್.ರಾಮಚಂದ್ರಪ್ಪಎಂಬವರನ್ನು ಅಪರಾಧಿಗಳನ್ನು ಹಿಡಿದಿದ್ದರು. ಆಗ ರಾಮಚಂದ್ರಪ್ಪ ಅವರಿಗೆ ಅಪರಾಧಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಇದನ್ನು ನೋಡಿದ ಯೋಧ ನವತಿಂದರ್ ಸಿಂಗ್ ಅವರು ರಾಮಚಂದ್ರಪ್ಪ ಅವರ ಸಹಾಯಕ್ಕೆ ಬಂದಿದ್ದ ವೇಳೆ ಅವರಿಗೂ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಇರಿದು ಹತ್ಯೆಗೈದು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ತನಿಖಾಧಿಕಾರಿಗಳಾದ ಮೇರಿ ಶೈಲಜಾ ಹಾಗೂ ಟಿ.ಆರ್. ಕುಮಾರಸ್ವಾಮಿ ಅವರು ಆರೋಪಿಗಳನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಕಾರಣಕ್ಕೆ ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.







