ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಪುತ್ತಿಗೆ

ಹುಬ್ಬಳ್ಳಿ, ನ. 16 : ಮಂಗಳೂರಿನ ಖ್ಯಾತ ಉದ್ಯಮಿ, ಸಮಾಜ ಸೇವಕ ಅಬ್ದುಲ್ ರವೂಫ್ ಪುತ್ತಿಗೆಯವರು ಗುರುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ಫಾರೂಕ್ ಹಾಗು ಬಸವರಾಜ ಹೊರಟ್ಟಿ ಸಹಿತ ಪಕ್ಷದ ಸಂಸದರು, ಶಾಸಕರು ಮತ್ತಿತರ ಮುಖಂಡರ ಸಮ್ಮುಖದಲ್ಲಿ ಅಬ್ದುಲ್ ರವೂಫ್ ಅವರು ಪಕ್ಷಕ್ಕೆ ಸೇರಿದ್ದಾರೆ. ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂದು ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಹೇಳಿದ್ದಾರೆ.
ಮಂಗಳೂರು, ಬೆಂಗಳೂರು ಹಾಗು ಮೂಡುಬಿದಿರೆಗಳಲ್ಲಿ ಕಾರ್ಯಾಚರಿಸುತ್ತಿರುವ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ವಿಶ್ವಾಸ್ ಬಾವಾ ಬಿಲ್ಡರ್ಸ್ ನ ಆಡಳಿತ ನಿರ್ದೇಶಕರಾಗಿರುವ ಅಬ್ದುಲ್ ರವೂಫ್ ಪುತ್ತಿಗೆಯವರು ಸಮಾಜ ಸೇವಾ ಸಂಸ್ಥೆ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ನ ಸ್ಥಾಪಕ ಅಧ್ಯಕ್ಷರು. ಈ ಸಂಸ್ಥೆ ಕಳೆದ ಸುಮಾರು ಒಂದೂವರೆ ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಾತಿ ಧರ್ಮ ಭೇದವಿಲ್ಲದೆ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಮರಳಿ ಬಾ ಶಾಲೆಗೆ, ಸ್ವ ಉದ್ಯೋಗ ತರಬೇತಿ, ಸಾಧಕರಿಗೆ ಪ್ರೋತ್ಸಾಹ, ಸೌಹಾರ್ದ ಕಾರ್ಯಕ್ರಮಗಳು, ಧಾರ್ಮಿಕ ಶಿಕ್ಷಕರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುವ ವಿನೂತನ ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗು ಯೋಜನೆಗಳ ಮೂಲಕ 'ಟ್ಯಾಲೆಂಟ್' ಗಮನ ಸೆಳೆದಿದೆ. ಕಳೆದ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಂಸ್ಥೆ ಪಾತ್ರವಾಗಿದೆ.
"ದೇವೇಗೌಡರ ದೂರದೃಷ್ಟಿ, ಸರಳ ಜೀವನ ಹಾಗು ಕುಮಾರಸ್ವಾಮಿಯವರ ಜನಪರ ಕಾಳಜಿ, ಜಾತಿ ಮತ ಭೇದವಿಲ್ಲದ ಜನಸೇವೆ ಹಾಗು ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ಅವರಿಗಿರುವ ಕಳಕಳಿಯನ್ನು ನೋಡಿ ನಾನು ಜೆಡಿಎಸ್ ಸೇರುತ್ತಿದ್ದೇನೆ. ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ಸಾಚಾರ್ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುತ್ತೇನೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಅವರ ಈ ಬದ್ಧತೆ ನನ್ನನ್ನು ಪಕ್ಷದತ್ತ ಆಕರ್ಷಿಸಿದೆ. ನಾನು ಉದ್ಯಮದೊಂದಿಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದವನು. ಈಗ ದೇವೇಗೌಡರು, ಕುಮಾರಸ್ವಾಮಿಯವರ ನೇತೃತ್ವದಲ್ಲಿ ರಾಜಕೀಯದ ಮೂಲಕ ಜನಸೇವೆ ಮಾಡುತ್ತೇನೆ. ಬಿ.ಎಂ. ಫಾರೂಕ್ ಅವರು ನನ್ನನ್ನು ಪಕ್ಷಕ್ಕೆ ಸೇರಿಸುವ ಮೂಲಕ ಈ ಸುವರ್ಣಾವಕಾಶ ಒದಗಿಸಿದ್ದಾರೆ" ಎಂದು ಅಬ್ದುಲ್ ರವೂಫ್ ಪುತ್ತಿಗೆ ಹೇಳಿದ್ದಾರೆ.







