ಸಮಗ್ರ ಕೃಷಿಪದ್ಧತಿ ಅಳವಡಿಸಿಕೊಳ್ಳಿ: ಕೃಷಿಮೇಳದಲ್ಲಿ ರಾಜ್ಯಪಾಲರ ಸಲಹೆ
ಬೆಂಗಳೂರು, ನ. 16: ರೈತರು ಸಮಗ್ರ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯಪಾಲ ವಜುಭಾಯಿ ವಲಾ ಅವರು ಸಲಹೆ ನೀಡಿದ್ದಾರೆ.
ರಾಜ್ಯ ಸರಕಾರವು ಯಲಹಂಕದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ‘ಕೃಷಿಮೇಳ-2017’ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಕೃಷಿ ಪ್ರಧಾನ ದೇಶ. ರೈತರು ಜಲಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೆಳೆಗಳ ಇಳುವರಿ ಹೆಚ್ಚಿಸಿಕೊಳ್ಳಬೇಕು. ಆಗ ರೈತರು ಆರ್ಥಿಕವಾಗಿ ಬಲಗೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ದೇಶದ ಕೃಷಿಕರಿಗೆ ನೀರಿನ ಹಂಚಿಕೆಯಲ್ಲಿ ಭೇದಭಾವ ಮಾಡಬಾರದು. ಸರಕಾರವು ಕೈಗಾರಿಕೆಗಳಿಗೆ ವಿದ್ಯುತ್‌ಶಕ್ತಿ ಪೂರೈಸಲು ನೀರು ವ್ಯಯಿಸುವುದಕ್ಕಿಂತ ಕೃಷಿಗೆ ಮೊದಲು ನೀರು ನೀಡಬೇಕು. ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಕಾವೇರಿ ವಿವಾದ ಬಗೆಹರಿಸಿಕೊಂಡರೆ, ದಕ್ಷಿಣ ಭಾರತದ ನೀರಿನ ಬವಣೆ ತಪ್ಪಲಿದೆ ಎಂದು ತಿಳಿಸಿದರು.
ಸರಕಾರಗಳು ಕೃಷಿ ಸಂಬಂಧಿ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿವೆ. ವಿಜ್ಞಾನಿಗಳು ಹಣಸಂಪಾದನೆಗೆ ಮುಂದಾಗದೆ, ರೈತಸ್ನೇಹಿ ಸಂಶೋಧನೆಗಳನ್ನು ಪರಿಚಯಿಸಬೇಕು ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಶಿವಣ್ಣ ಮಾತನಾಡಿ, ನ.19ರ ವರೆಗೆ ಕೃಷಿಮೇಳ ನಡೆಯಲಿದೆ. ಇಲ್ಲಿ ವಿವಿಧ ಬೆಳೆಗಳ 800 ತಳಿಗಳನ್ನು ಕಾಣಬಹುದು. ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.
ರಾಜ್ಯಪಾಲರು ಕಬ್ಬು, ಅಲಸಂದೆ, ಮುಸುಕಿನ ಜೋಳ, ತೊಗರಿ, ನೇರಳೆಯ ಹೊಸ ತಳಿಗಳನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕೃಷಿಕರಾದ ಸಿ.ಆರ್. ರಾಧಾಕೃಷ್ಣ ಹಾಗೂ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ರೈತರಾದ ರಾಜು ಸೆತ್ತೆಪ್ಪ ಬೈರುಗೋಳ ಅವರಿಗೆ ನೀಡಿ ಗೌರವಿಸಲಾಯಿತು.
ಕೃಷಿಮೇಳದಲ್ಲಿ ಭಾಗವಹಿಸಿದ್ದ ಸಾವಿರಾರು ರೈತರು ಕೃಷಿಗೆ ಸಂಬಂಧಿತ ವಿನೂತನ ವಿಧಾನಗಳು, ವೈವಿಧ್ಯಮಯ ತಳಿಗಳು, ಹೊಸ ಉಪಕರಣಗಳನ್ನು ಬಳಸುವ ಬಗೆಯನ್ನು ತಿಳಿದರು. ಸ್ವಸಹಾಯ ಸಂಘಗಳು ಮಳಿಗೆಗಳನ್ನು ಹಾಕಿ ಕೃಷಿ ಉತ್ಪನ್ನಗಳನ್ನು ಮೇಳದಲ್ಲಿ ಮಾರಾಟ ಮಾಡುತ್ತಿವೆ.







