ನಕಲಿ ಮದ್ಯ ಸೇವಿಸಿ ಮೂವರ ಸಾವು: ಆರು ಮಂದಿಯ ಬಂಧನ

ಹಜಿಪುರ್, ನ.16: ನಕಲಿ ಮದ್ಯ ಸೇವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸಂಭವಿಸಿದ್ದು ಘಟನೆಯಲ್ಲಿ ತೀವ್ರ ಅಸ್ವಸ್ಥನಾದ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಸರಕಾರವು ಕಳೆದ ವರ್ಷ ರಾಜ್ಯಾದ್ಯಂತ ಮದ್ಯಪಾನ ನಿಷೇಧಿಸಿ ಆದೇಶ ಹೊರಡಿಸಿತ್ತು.
ಇಲ್ಲಿನ ಸಮಸ್ತಿಪುರ್ ಜಿಲ್ಲೆಯಲ್ಲಿ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಪೊಲೀಸರು 4000 ಲೀಟರ್ ಮದ್ಯದ ಜೊತೆಗೆ ಆರು ಮಂದಿಯನ್ನು ಬಂಧಿಸಿದ್ದು ಟ್ರಕ್‌ವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಾವು ನಕಲಿ ಮದ್ಯ ಸೇವಿಸಿದ ಕಾರಣ ಸಂಭವಿಸಿವೆ ಎಂದು ಸ್ಥಳೀಯರು ಮತ್ತು ಗ್ರಾಮದ ಮುಖ್ಯಸ್ಥರು ಆರೋಪಿಸಿದರೆ ಇವರ ಸಾವಿನ ನಿಖರ ಕಾರಣವನ್ನು ಮರಣೋತ್ತರ ಪರೀಕ್ಷೆ ಮತ್ತು ತನಿಖೆಯ ನಂತರ ದೃಡಪಡಿಸಲು ಸಾಧ್ಯ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಮೃತ ವ್ಯಕ್ತಿಗಳನ್ನು ಅರುಣ್ ಪಟೇಲ್ (50), ದೇವೇಂದ್ರ ಪಾಸ್ವಾನ್ (45) ಮತ್ತು ಲಾಲ್‌ಬಾಬು ಪಾಸ್ವಾನ್ (46) ಎಂದು ಗುರುತಿಸಲಾಗಿದೆ.
Next Story





