ಸೇನೆಯಲ್ಲಿ ಪ್ರತ್ಯೇಕ ‘ಯಾದವ ರೆಜಿಮೆಂಟ್’ಗೆ ಆಗ್ರಹ: ಪ್ರಧಾನಿಗೆ 20 ಲಕ್ಷ ಅಂಚೆಚೀಟಿ ರವಾನೆ

ಗಾಝಿಯಾಬಾದ್, ನ.16: ಭಾರತೀಯ ಸೇನೆಯಲ್ಲಿ ಪ್ರತ್ಯೇಕ ಯಾದವ ರೆಜಿಮೆಂಟ್ ಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯಾದವ ಮಹಾಸಭಾವು (ಎಐವೈಎಂ) ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 20 ಲಕ್ಷ ಅಂಚೆಚೀಟಿಗಳನ್ನು ಕಳುಹಿಸಿದೆ.
ಇತರ ಎಲ್ಲಾ ಜಾತಿಗಳ ಹೆಸರಲ್ಲಿ ಸೇನೆಯಲ್ಲಿ ಪ್ರತ್ಯೇಕ ದಳಗಳಿವೆ ಆದರೆ ಯಾದವ ಸಮುದಾಯವು ಹಲವು ವರ್ಷಗಳಿಂದ ಪ್ರತ್ಯೇಕ ಅಹಿರ್ ರೆಜಿಮೆಂಟ್‌ನ ಬೇಡಿಕೆಯನ್ನಿಟ್ಟಿದ್ದರೂ ಇನ್ನೂ ಕೂಡಾ ಅದು ನೆರವೇರಿಲ್ಲ ಎಂದು ಮಹಾಸಭಾ ತಿಳಿಸಿದೆ.
ನಮ್ಮ ಸಮುದಾಯದ ಸೈನಿಕರು ಭಾರತ-ಚೀನಾ ಮತ್ತು ಕಾರ್ಗಿಲ್ ಯುದ್ಧ ಸೇರಿದಂತೆ ಅಕ್ಷರಧಾಮ ಮತ್ತು ಸಂಸತ್ ಮೇಲಿನ ದಾಳಿಗಳ ಸಂದರ್ಭದಲ್ಲೂ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ನಾವು ನಮ್ಮ ಜೀವ ತೆರಲು ಸಿದ್ಧವಿರುವಾಗ ನಮಗೂ ಒಂದು ಪ್ರತ್ಯೇಕ ರೆಜಿಮೆಂಟ್ ಇರಬೇಕಾಗಿರುವುದು ಸಹಜ ಎಂದು ಎಐವೈಎಂ ಪ್ರಧಾನ ಕಾರ್ಯದರ್ಶಿ ಸತ್ಯ ಪ್ರಕಾಶ್ ಯಾದವ್ ತಿಳಿಸಿದ್ದಾರೆ.
ಇತ್ತೀಚೆಗೆ ಯಾದವ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸತ್ಯಪ್ರಕಾಶ್, 1965ರಲ್ಲಿ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಅಹಿರ್ ಯೋಧರ ಕಾಣಿಕೆಯನ್ನು ನೆನಪಿಸಿದರು. ಅಂದು ಮೇಜರ್ ಶೈತಾನ್ ಸಿಂಗ್ ಅವರ ನೇತೃತ್ವದಲ್ಲಿ 114 ಅಹಿರ್ ಜವಾನರು ಯುದ್ಧದಲ್ಲಿ ಭಾಗಿಯಾಗಿದ್ದರು ಈ ಯುದ್ಧದಲ್ಲಿ ಮೇಜರ್ ಸಿಂಗ್ ಹುತಾತ್ಮರಾಗಿದ್ದರು ಎಂದು ತಿಳಿಸಿದ್ದರು.





