ಲಾಠಿಯಿಂದ ಥಳಿಸಿದ್ದು ತಪ್ಪು: ಟಿ.ಸುನೀಲ್ ಕುಮಾರ್
ಹೊಟೇಲ್ ಮಾಲಕನಿಗೆ ಎಸಿಪಿ ಹಲ್ಲೆ ಪ್ರಕರಣ
ಬೆಂಗಳೂರು, ನ.16: ದಿಣ್ಣೂರಿನ ಶೆಟ್ಟಿ ಲಂಚ್ ಹೋಮ್ ಹೊಟೇಲ್ ಮಾಲಕ ರಾಜುಶೆಟ್ಟಿ ಅವರಿಗೆ ಜೆಸಿ ನಗರ ಉಪವಿಭಾಗದ ಎಸಿಪಿ ಮಂಜುನಾಥ್ ಬಾಬು ಅವರು ಲಾಠಿಯಿಂದ ಥಳಿಸಿದ್ದು ತಪ್ಪು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜುಶೆಟ್ಟಿ ಅವರು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೆ ಅಥವಾ ಸಿಬ್ಬಂದಿಯನ್ನು ನಿಂದಿಸಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಎಸಿಪಿ ಲಾಠಿಯಿಂದ ರಾಜುಶೆಟ್ಟಿ ಅವರಿಗೆ ಮನಸೋ ಇಚ್ಛೆ ಹೊಡೆದಿರುವುದು ಸರಿಯಲ್ಲ. ಈ ಬಗ್ಗೆ ಎಸಿಪಿ ಅವರಿಂದ ವಿವರಣೆ ಕೇಳಿದ್ದೇನೆ. ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರಿಗೆ ಸೂಚಿಸಿದ್ದೇನೆ ಎಂದರು.
ಒತ್ತಾಯ: ಹೊಟೇಲ್ ಮಾಲಕ ರಾಜುಶೆಟ್ಟಿ ಅವರಿಗೆ ಲಾಠಿಯಿಂದ ಹೊಡೆದಿರುವ ಎಸಿಪಿ ಮಂಜುನಾಥ್ ಬಾಬು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೊಟೇಲ್ ಮಾಲಕರ ಸಂಘ ಒತ್ತಾಯಿಸಿದೆ.
ಮಧ್ಯರಾತ್ರಿ ವಹಿವಾಟು ನಡೆಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಎದುರು ಮಾತನಾಡಿದರೆಂದು ಆರೋಪಿಸಿ ರಾಜುಶೆಟ್ಟಿ ಅವರಿಗೆ ಮಂಜುನಾಥ್ ಬಾಬು ಅವರು ಲಾಠಿಯಿಂದ ಹೊಡೆದಿರುವ ಘಟನೆ ಬುಧವಾರ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.





