ನ.26ರಿಂದ ಜನಸಂಕಲ್ಪ ಜಾಥಾ
ಬೆಂಗಳೂರು, ನ.16: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾವು ನ.26ರಿಂದ ಜನವರಿ 26ರ ವರೆಗೆ ಜನಾಧಿಕಾರಕ್ಕಾಗಿ ಜನಸಂಕಲ್ಪ ಜಾಥಾ ಆಯೋಜಿಸಿದೆ ಎಂದು ಜಾಥಾದ ಸ್ವಾಗತ ಸಮಿತಿ ಅಧ್ಯಕ್ಷ ಲೋಲಾಕ್ಷ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಇಂದು ಸಂವಿಧಾನದ ಆಶಯಗಳನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಥಾ ಆಯೋಜಿಸಿದ್ದೇವೆ. ಇದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಜಾಥಾ ಪ್ರಯುಕ್ತ ಜಿಲ್ಲಾ ಹಾಗೂ ಆಯ್ದ ತಾಲ್ಲೂಕು ಕೇಂದ್ರಗಳಲ್ಲಿ ಸಭೆ, ವಿಚಾರ ಸಂಕಿರಣ, ಬೀದಿ ನಾಟಕಗಳನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಜಾಥಾದಲ್ಲಿ ಮತದಾನದ ಮಹತ್ವ, ಮೂಲಭೂತ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಪಕ್ಷವನ್ನು ಬೆಂಬಲಿಸುವಂತೆ ಕೋರುತ್ತೇವೆ. ಸಂವಿಧಾನ ಅಂಗೀಕಾರಗೊಂಡ ನ.26ರಂದು ಕೋಲಾರದಿಂದ ಜಾಥಾ ಆರಂಭವಾಗಿ ಸಂವಿಧಾನ ಜಾರಿಯಾದ ಜ.26ರಂದು ಬೆಂಗಳೂರಿನಲ್ಲಿ ಅಂತ್ಯಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.





