ವೇತನ ಶ್ರೇಣಿಗೆ ಅನುಗುಣವಾಗಿ ಸಂಬಳ ನೀಡಲು ಒತ್ತಾಯ
ಬೆಂಗಳೂರು, ನ.16: ವೈದ್ಯಕೀಯ ಸಿಬ್ಬಂದಿಗೆ ಸುಪ್ರೀಂಕೋರ್ಟ್ ನಿಗದಿಪಡಿಸಿರುವ ವೇತನ ಶ್ರೇಣಿಗೆ ಅನುಗುಣವಾಗಿ ಸಂಬಳ ಮತ್ತು ಭತ್ತೆಗಳನ್ನು ನೀಡಬೇಕೆಂದು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜುಗಳ ಬೋಧಕೇತರ ನೌಕರರ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಜಿ.ಆರ್.ಶಿವಶಂಕರ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜರಾಜೇಶ್ವರಿ ಸಂಸ್ಥೆಯಲ್ಲಿ 5 ಕಾಲೇಜುಗಳಿವೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1,800, ಎರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ 150, ದಂತ ವೈದ್ಯಕೀಯ ಕಾಲೇಜಿನಲ್ಲಿ 75, ನರ್ಸಿಂಗ್ ಕಾಲೇಜಿನಲ್ಲಿ 50 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ವೈದ್ಯಕೀಯ ಕಾಲೇಜಿನಲ್ಲಿನ ಶುಶ್ರೂಷಕರ ದರ್ಜೆಯ ಸಿಬ್ಬಂದಿಗೆ ಕನಿಷ್ಠ 20 ಸಾವಿರ ಸಂಬಳ ನೀಡಬೇಕು. ಇಲ್ಲಿ ಪ್ರತಿತಿಂಗಳು ಕನಿಷ್ಠ 10 ಸಾವಿರದಿಂದ ಗರಿಷ್ಠ 15 ಸಾವಿರ ವೇತನ ನೀಡಿ ದುಡಿಸಿಕೊಳ್ಳುತ್ತಿದ್ದಾರೆ. ಪಿ.ಎಫ್. ಸೌಲಭ್ಯ, ವೇತನ ಸಹಿತ ಹೆರಿಗೆ ರಜೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಶುಶ್ರೂಷಕಿ ಮಂಜುಳಾ ಮಾತನಾಡಿ, ಸಿಗಬೇಕಾದ ಸೌಲಭ್ಯಗಳನ್ನು ನೀಡಲು 5 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಕಾಲೇಜಿನ ಆಡಳಿತ ಮಂಡಳಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಇದಕ್ಕಾಗಿ ಧರಣಿ ನಡೆಸಿದರೆ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಹಾಸ್ಟೆಲ್‌ಗಳಿಗೆ ವಿದ್ಯುತ್, ನೀರಿನ ಸಂಪರ್ಕವನ್ನು ನಿಲ್ಲಿಸಿ ಬೆದರಿಸುತ್ತಾರೆ. ಹೆರಿಗೆ ರಜೆ ಬಳಿಕ ಕೆಲಸಕ್ಕೆ ಮರಳಿದಾಗ, ಹೊಸ ಉದ್ಯೋಗಿಯೆಂದು ಪರಿಗಣಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ಕೆಲಸಕ್ಕೆ ಸೇರುವಾಗ ವಿದ್ಯಾಭ್ಯಾಸದ ಮೂಲ ದಾಖಲಾತಿಗಳನ್ನು ಪಡೆಯುತ್ತಾರೆ. ಕೆಲಸ ಬೀಡುವಾಗ ದಾಖಲಾತಿಗಳಿಗಾಗಿ ಅವರಲ್ಲಿ ಅಂಗಲಾಚುವ ಸ್ಥಿತಿಯಿದೆ ಎಂದು ಶುಶ್ರೂಷಕಿ ದೂರಿದರು.
500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಸಿಬ್ಬಂದಿಗೆ ವೇತನ ಶ್ರೇಣಿ ಅನ್ವಯ ಆಗುತ್ತವೆ. ಆದರೆ ಇಲ್ಲಿ 1,200 ಹಾಸಿಗೆ ವ್ಯವಸ್ಥೆ ಇದ್ದರೂ, ಸಿಬ್ಬಂದಿಗೆ ಅಗತ್ಯ ಸೌಲಭ್ಯ ನೀಡುತ್ತಿಲ್ಲ. ‘ನಮ್ಮದು ಭಾಷಾ ಅಲ್ಪಸಂಖ್ಯಾತರ ಸಂಸ್ಥೆಯೆಂದು ಆಡಳಿತ ಮಂಡಳಿ ಕಾರ್ಮಿಕ ಇಲಾಖೆಗೆ ಸಮಜಾಯಿಷಿ ನೀಡುತ್ತಿದೆ’. ಕಾರ್ಮಿಕ ಸಚಿವರು ಸಿಬ್ಬಂದಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಶಿವಶಂಕರ್ ಒತ್ತಾಯಿಸಿದರು.







