ನ.18ರಿಂದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ
ಉಡುಪಿ, ನ.16: ಉಡುಪಿ ರಂಗಭೂಮಿ ವತಿಯಿಂದ 38ನೆ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ನ.18ರಿಂದ ಡಿ.2ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಬಾರಿಯ ಸ್ಪರ್ಧೆಯಲ್ಲಿ ಬೆಂಗಳೂರಿನ 4, ಮೈಸೂರಿನ 3, ಮಂಗಳೂರಿನ 2 ಕಲಬುರ್ಗಿ, ಶಿವಮೊಗ್ಗದ ತಲಾ ಒಂದು ಮತ್ತು ಉಡುಪಿ ಜಿಲ್ಲೆಯ ನಾಲ್ಕು ತಂಡಗಳು ಭಾಗವಹಿಸಲಿವೆ. ಒಟ್ಟು 15 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನ.18- ಬೆಂಗಳೂರು ಪುವರ ಆರ್ಟ್ ಸ್ಟುಡಿಯೋ ಟ್ರಸ್ಟ್‌ನಿಂದ ‘ಕುದುರೆ ಬಂತು ಕುದುರೆ’(ನಿ: ಹನುರಾಮ ಸಂಜೀವ), ನ.19- ಬೆಂಗಳೂರು ಏಷಿ ಯನ್ ಥೇಟರ್‌ನಿಂದ ‘ವರಾಹ ಪುರಾಣ’(ನಿ: ಸಿದ್ರಾಮ ಕೊಪ್ಪರ), ನ.20- ಮಂಗಳೂರು ಕಲಾಕುಲ್‌ನಿಂದ ‘ಮಹಾಕಾಲ’(ನಿ: ಗುರುಮೂರ್ತಿ ವಿ. ಎಸ್.), ನ.21- ಮೈಸೂರು ಗೆಜ್ಜೆಹೆಜ್ಜೆ ರಂಗ ತಂಡದಿಂದ ‘ಪುರಹರ’(ನಿ: ಉದಯ್ ಎಸ್.), ನ.22-ಮಂಗಳೂರು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕೇಳೆ ಸಖಿ ಚಂದ್ರಮುಖಿ’(ನಿ: ಶಶಿರಾಜ್ ಕಾವೂರು), ನ.23- ಬೆಂಗಳೂರು ಅನಿಕೇತನ ಸಿಯೋನ್ ಪ್ರತಿಷ್ಠಾನದಿಂದ ‘ತುಕ್ರನ ಕನಸು’(ನಿ: ಪುನೀತ್ ಶೆಟ್ಟಿ), ನ.24- ಕಲಬುರ್ಗಿ ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದಿಂದ ‘ರಾನ್’(ನಿ: ವಿಶ್ವರಾಜ್ ಪಾಟೀಲ್), ನ.25- ಮೈಸೂರು ಜಿಪಿಐಇಆರ್‌ನಿಂದ ‘ಅಣ್ಣಾವಾಲಿ’(ನಿ: ಮೈಮ್ ರಮೇಶ್), ನ.26- ಹೆಗ್ಗೋಡು ಕೆ.ವಿ.ಸುಬ್ಬಣ್ಣ ರಂಗಸಮೂಹದಿಂದ ‘ಸಂದೇಹ ಸಾಮ್ರಾಜ್ಯ’ (ನಿ: ಮಂಜುನಾಥ ಬಡಿಗೇರ), ನ.27- ಬೆಂಗಳೂರು ಅಜೀವಿಕದಿಂದ ‘ಪೋಸ್ಟ್ ಬಾಕ್ಸ್ ನಂ.9’(ನಿ: ಉದಯ್ ಸೋಸಲೆ), ನ.28- ಕಟಪಾಡಿ ವನಸುಮ ವೇದಿಕೆಯಿಂದ ‘ಮಲಾಲಾ ಅಲ್ಲಾ’(ನಿ:ಬಾಸುಮ ಕೊಡಗು), ನ.29- ಕೊಡವೂರು ಸುಮನಸಾದಿಂದ ‘ರಥಯಾತ್ರೆ’(ನಿ: ಗುರುರಾಜ್ ಮಾರ್ಪಳ್ಳಿ), ನ.30- ಬೈಂದೂರು ಲಾವಣ್ಯದಿಂದ ‘ಗಾಂಧಿಗೆ ಸಾವಿಲ್ಲ’(ನಿ: ಗಿರೀಶ್ ಬೈಂದೂರು), ಡಿ.1- ಮೈಸೂರು ಅನುಕರಣದಿಂದ ‘ಬೋನಿಗೆ ಬಿದ್ದವರು’(ನಿ: ಜೀವನ್ ಕುಮಾರ್ ಹೆಗ್ಗೋಡು), ಡಿ.2- ಬ್ರಹ್ಮಾವರ ಹಾರಾಡಿ ಭೂಮಿಕಾದಿಂದ ‘ವೃತ್ತದ ವೃತ್ತಾಂತ’(ನಿ: ಬಿಎಸ್.ರಾಮ್ ಶೆಟ್ಟಿ) ಾಟಕಗಳು ಪ್ರದರ್ಶನಗೊಳ್ಳಲಿವೆ.
ವಿಜೇತ ತಂಡಕ್ಕೆ ಪ್ರಥಮ 25ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 15ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಬರುವ ತಂಡಗಳಿಗೆ ಪ್ರಯಾಣ ಭತ್ಯೆ ಜೊತೆ ಗೌರವಧನವಾಗಿ 5000ರೂ. ನೀಡಲಾಗುವುದು.
ನ.18ರಂದು ಸಂಜೆ 6ಗಂಟೆಗೆ ಸ್ಪರ್ಧೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್ ಉದ್ಘಾಟಿಸಲಿರುವರು. ಬಹುಮಾನ ವಿತರಣಾ ಸಮಾರಂಭವು ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಂದಕುಮಾರ್, ಜತೆ ಕಾರ್ಯದರ್ಶಿ ಗಳಾದ ರವಿರಾಜ್ ಎಚ್.ಪಿ., ಭಾಸ್ಕರ ರಾವ್ ಕಿದಿಯೂರು, ಸದಸ್ಯ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.







