ನ.21ರೊಳಗೆ ಹಣ ಹಿಂತಿರುಗಿಸದಿದ್ದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಎಲ್ಲೈಸಿ ಏಜೆಂಟರ ವಂಚನೆ ಪ್ರಕರಣ: ಗ್ರಾಹಕರ ನ್ಯಾಯಾಲಯ ತೀರ್ಪು

ಉಡುಪಿ, ನ.16: ಎಲ್ಲೈಸಿ ನೇಮಕ ಮಾಡಿದ್ದ ಏಜೆಂಟರು ಪಾಲಿಸಿದಾರರಿಗೆ ಹಣ ವಂಚಿಸಿರುವ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಬಳಕೆದಾರರ ನ್ಯಾಯಾಲಯವು ಕಡೂರು ತಾಲೂಕಿನ 64 ಮಂದಿ ಪಾಲಿಸಿದಾರರ ಪ್ರೀಮಿ ಯಂ ಹಣವನ್ನು ಒಂದು ತಿಂಗಳೊಳಗೆ ಹಿಂದಿರುಗಿಸುವಂತೆ ಅ.21ರಂದು ತೀರ್ಪು ನೀಡಿದ್ದರೂ ಎಲ್ಲೈಸಿ ಉಡುಪಿ ವಿಭಾಗ ಈವರೆಗೆ ಹಣ ಪಾವತಿಸಿಲ್ಲ ಎಂದು ಪಾಲಿಸಿದಾರರು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಎಲ್ಲೈಸಿಯೇ ನೇಮಿಸಿದ್ದ ಮಧ್ಯವರ್ತಿ ಸಂಸ್ಥೆಯ ದೇವರಾಜ್ ಎಂಬಾತನನ್ನು ನ.3ರಂದು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಶೋಭಾರಾಣಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಗ್ರಾಹಕ ನ್ಯಾಯಾಲಯ ತೀರ್ಪು ನೀಡಿ ನ.21ಕ್ಕೆ ಒಂದು ತಿಂಗಳಾ ಗಲಿದ್ದು, ಈ ಅವಧಿಯೊಳಗೆ ಹಣ ಹಿಂತಿರುಗಿಸದಿದ್ದರೆ ಎಲ್ಲೈಸಿ ಉಡುಪಿ ವಿಭಾಗದ ವಿರುದ್ಧ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಇಂದು ಕುಂಜಿಬೆಟ್ಟು ಕಾನೂನು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಾಲಿಸಿದಾರರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: 2009ರಲ್ಲಿ ಭಾರತೀಯ ಜೀವವಿಮಾ ನಿಗಮ ಜಾರಿಗೆ ತಂದ ಮೈಕ್ರೊ ಇನ್ಶೂರೆನ್ಸ್ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ ಎನ್.ಆರ್. ಪುರ ಮುಂತಾದ ತಾಲೂಕುಗಳ 200ಕ್ಕೂ ಅಧಿಕ ಗ್ರಾಮಗಳಿಂದ 58,000 ಕ್ಕೂ ಹೆಚ್ಚಿನ ಬಡಜನರು ಈ ವಿಮಾ ಯೋಜನೆಗೆ ಸೇರಿ ಪಾಲಿಸಿ ಖರೀದಿಸಿ ದರು. ಪ್ರತಿ ತಿಂಗಳು ಇವರಿಂದ ಪ್ರೀಮಿಯಂ ಹಣವನ್ನು ಸಂಗ್ರಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಅದನ್ನು ಎಲ್ಲೈಸಿಯಿಂದ ನೇಮಿಸಲ್ಪಟ್ಟ ಏಜೆಂಟರಿಗೆ ಹಸ್ತಾಂತರಿಸುತ್ತಿದ್ದರು.
2013ರ ಜುಲೈ ತಿಂಗಳಲ್ಲಿ ಪಾಲಿಸಿದಾರರೊಬ್ಬರು ನಿಧನರಾದಾಗ ಈ ಪಾಲಿಸಿಗಳಲ್ಲಿ ಎಲ್ಲೈಸಿಯು ಕೇವಲ ಒಂದೇ ಪ್ರೀಮಿಯಂ ಕಂತನ್ನು ಸ್ವೀಕರಿಸಿ ರುವುದನ್ನು ಗಮನಕ್ಕೆ ಬಂತು. ಪಾಲಿಸಿದಾರರು ಕಟ್ಟಿದ್ದ ಹಣವನ್ನು ಎಲ್ಲೈಸಿ ಪ್ರತಿನಿಧಿಗಳು ಲಪಟಾಯಿಸಿರುವುದು ಬೆಳಕಿಗೆ ಬಂತು. ಈ ಬಗ್ಗೆ ಸಾಕಷ್ಟು ಗಲಾಟೆ ನಡೆಯಿತು. ಆದರೂ ಎಲ್ಲೈಸಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಕೊನೆಗೆ 2014ರಲ್ಲಿ ತರೀಕೆರೆ ಹಾಗೂ ಕಡೂರು ಪೊಲೀಸ್ ಠಾಣೆಗಳಲ್ಲಿ ಏಜೆಂಟರ್‌ಗಳ ವಿರುದ್ಧ ದೂರುಗಳು ದಾಖಲಾದವು. ಆದರೆ ಅವುಗಳನ್ನು ಬೆನ್ನಟ್ಟುವ ಯಾವುದೇ ಆಸಕ್ತಿಯನ್ನು ಅಧಿಕಾರಿಗಳು ತೋರಿಸಲಿಲ್ಲ.
ಪ್ರತಿಷ್ಠಾನಕ್ಕೆ ದೂರು: ಮೋಸ ಹೋದ ಪಾಲಿಸಿದಾರರು ಹಾಗೂ ಅಂಗನ ವಾಡಿ ಕಾರ್ಯಕರ್ತೆಯರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿ ಷ್ಠಾನವನ್ನು ಸಂಪರ್ಕಿಸಿದರು. ಸಮಸ್ತ ದಾಖಲೆಗಳನ್ನು ಪರಿಶೀಲಿಸಿದ ಪ್ರತಿಷ್ಠಾನ ಎಲ್ಲೈಸಿಯು ಮಾರ್ಗದರ್ಶಿ ಸೂತ್ರಗಳನ್ನು ಕಡೆಗಣಿಸಿ ವಿಶ್ವಾಸಾರ್ಹತೆ ಇಲ್ಲದ ಸಂಸ್ಥೆಗಳನ್ನು ಏಜೆಂಟರನ್ನಾಗಿ ನೇಮಿಸಿರುವುದನ್ನು ಮತ್ತು 3 ವರ್ಷಗಳ ಕಾಲ ಏಜೆಂಟರು ಪಾಲಿಸಿದಾರರ ಹಣವನ್ನು ಎಲ್ಲೈಸಿಗೆ ಜಮೆ ಮಾಡದಿದ್ದರೂ ಯಾವುದೇ ವಿಚಾರಣೆ ನಡೆಸದೆ ನಿರ್ಲಕ್ಷ್ಯ ತೋರಿರುವುದನ್ನು ಗಮನಿಸಿತು.
ಇದರ ವಿರುದ್ಧ ಜಿಲ್ಲಾ ಬಳಕೆದಾರರ ನ್ಯಾಯಾಲಯದಲ್ಲಿ ದೂರು ದಾಖಲಿಸ ಲಾಯಿತು. ಸುಮಾರು 16 ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾ ಲಯವು ಇದೀಗ ತೀರ್ಪು ಪ್ರಕಟಿಸಿ ಪಾಲಿಸಿದಾರರು ಕಟ್ಟಿದ ಪ್ರೀಮಿಯಂ ಹಣವನ್ನು ಪೂರ್ಣವಾಗಿ ಹಿಂದಿರುಗಿಸಲು ಆದೇಶಿಸಿದೆ. ಇದರೊಂದಿಗೆ ತಲಾ 3000 ರೂ. ಪರಿಹಾರ ಹಾಗೂ 1000ರೂ. ದಾವೆಯ ಖರ್ಚನ್ನು ಒಂದು ತಿಂಗಳೊಳಗೆ ನೀಡಲು ಆದೇಶಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭಾಗ್ ತಿಳಿಸಿದರು.
ಪ್ರಧಾನಿಗೆ ದೂರು: ನ್ಯಾಯಾಲಯವು ತೀರ್ಪು ಪ್ರಕಟಿಸಿ 25 ದಿನಗಳಾ ದರೂ ಎಲ್ಲೈಸಿ ಪಾಲಿಸಿದಾರರ ಹಣವನ್ನು ಪಾವತಿಸಿಲ್ಲ. ಇದೀಗ ಪಾಲಿಸಿದಾ ರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಥಿಕ ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸಲು ನಿರ್ದೇಶಿಸಬೇಕೆಂದು ವಿನಂತಿಸಿದ್ದಾರೆ. ಯಾವ ಕಾರಣಕ್ಕೂ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ನ್ಯಾಯದ ವಿಳಂಬ ಮಾಡದಂತೆ ಡಾ.ಶಾನುಭಾಗ್ ಎಲ್ಲೈಸಿಯನ್ನು ಒತ್ತಾಯಿಸಿ ದ್ದಾರೆ.
‘ನ್ಯಾಯಾಲಯವೇ ವಿಧಿಸಿದ ಗಡುವು ನ.21ರವರೆಗೆ ನಾವು ಕಾಯುತ್ತೇವೆ. ಅದರೊಳಗೆ ಆದೇಶ ಪಾಲಿಸದಿದ್ದಲ್ಲಿ ನಾವೆಲ್ಲರೂ ಎಲ್ಲೈಸಿ ಉಡುಪಿ ವಿಭಾಗದ ಕಚೇರಿ ಎದುರು ಆಮರಣಾಂತ ಉಪವಾಸ ಸಹಿತ ವಿವಿಧ ರೀತಿಯ ಸಂವಿಧಾ ನಾತ್ಮಕ ಪ್ರತಿಭಟನೆಯನ್ನು ನಡೆಸುತ್ತೇವೆ’ ಎಂದು ಪಾಲಿಸಿದಾರರಾದ ಕಡೂರು ತಾಲೂಕಿನ ಆಣೆಗೆರೆಯ ಲಲಿತಮ್ಮ ಎಲ್ಲೈಸಿ ಅಧಿಕಾರಿಗಳಿಗೆ ಇಂದು ಸಲ್ಲಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
‘64 ಪಾಲಿಸಿದಾರರು ಒಟ್ಟು 3ಲಕ್ಷ ರೂ. ಹಣ ಪಾವತಿಸಿದ್ದು, ನಾನು ಒಟ್ಟು 7.20ಲಕ್ಷ ರೂ. ಪಾವತಿಸಿದ್ದೇನೆ. ಇವರು ನಮಗೆ ವಂಚಿಸಿದ್ದರಿಂದ ನಾನು ಸಾಲ ಮಾಡಿ ಜನರಿಗೆ ಆದಷ್ಟು ಹಣ ಕೊಟ್ಟಿದ್ದೇನೆ. ಇದೇ ಚಿಂತೆಯಲ್ಲಿ ನನ್ನ ಪತಿ ನಿಧನರಾದರು. ಒಟ್ಟು ಮೂರು ಬಾರಿ ಉಡುಪಿಗೆ ಬಂದಿದ್ದೇನೆ. ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಕಡೂರಿನ ಅಂಗನ ವಾಡಿ ಕಾರ್ಯಕರ್ತೆ ಸುಮಿತ್ರಾ ಕಣ್ಣೀರಿಟ್ಟರು.







