ಮೂಡುಬಿದಿರೆಯಲ್ಲಿ ದಕ್ಷಿಣ ವಲಯ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭ

ಮೂಡುಬಿದಿರೆ, ನ. 16: ಮಂಗಳೂರು ವಿ.ವಿ. ಹಾಗೂ ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ವಿದ್ಯಾಗಿರಿ ಕ್ಯಾಂಪಸ್‌ನ ನುಡಿಸಿರಿ ಸಭಾಂಗಣದ ಒಳಾಂಗಣ ಆವರಣದಲ್ಲಿ 4 ಮ್ಯಾಟ್ ಅಂಕಣಗಳಲ್ಲಿ ನಡೆಯುವ ದಕ್ಷಿಣ ವಲಯ ಅಂತರ್ ವಿ.ವಿ. ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್ ಗುರುವಾರ ಆರಂಭಗೊಂಡಿತು.
ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಭೈರಪ್ಪ ಚಾಂಪಿಯನ್‌ಶಿಫ್‌ನ್ನು ಉದ್ಘಾಟಿಸಿ, ಪರೀಕ್ಷೆ ಸಂದರ್ಭದಲ್ಲಿ ವಿಶ್ವಿದ್ಯಾಲಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಪ್ರತ್ಯೇಕ ಪರೀಕ್ಷೆ ಹಾಗೂ ಹಾಜರಾತಿಯನ್ನು ಸರಿದೂಗಿಸುವ ವ್ಯವಸ್ಥೆಯನ್ನು ಕ್ರೀಡಾ ನೀತಿಯಲ್ಲಿ ಸೇರಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಅಖಿಲ ಭಾರತದ ವಿ.ವಿಯಲ್ಲಿ ಅಗ್ರಸ್ಥಾನಿಯಾಗಿರುವುದು ಹೆಮ್ಮೆಯ ವಿಷಯ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ, ಕ್ರೀಡಾ ಸಾಧನೆ ವಿ.ವಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳಲು ನೆರವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ರಾಕೇಶ್ ಮಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸನ್ಮಾನ : ಪ್ರೊ ಕಬಡ್ಡಿ ಪಟುಗಳಾದ ಸುಕೇಶ್ ಹೆಗ್ಡೆ ಕಡ್ತಲ, ಪ್ರಶಾಂತ್ ರೈ, ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸಾಧನೆ ಮಾಡುತ್ತಿರುವ ಸುನೀತಾ, ರಕ್ಷಿತ್ ಮತ್ತು ಸುನಿಲ್ ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಭಾರತ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ ಹಾಗೂ ಪಾಂಡಿಚೇರಿ ರಾಜ್ಯಗಳಿಂದ ಸುಮಾರು 58 ವಿಶ್ವವಿದ್ಯಾನಿಲಯ ತಂಡಗಳು ಈ ಚಾಂಪಿಯನ್‌ಶಿಪ್ ಭಾಗವಹಿಸುತ್ತಿವೆ.
ಪಂದ್ಯಾಟ ಹಗಲು ಹಾಗೂ ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ. ತಾಂತ್ರಿಕ ವಿಭಾಗದಲ್ಲಿ ದ.ಕ. ಜಿಲ್ಲಾ ಕಬಡ್ಡಿ ಸಂಸ್ಥೆಯ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಭಾಗವಹಿಸಿದ್ದಾರೆ. ಕ್ರೀಡಾಪಟು ಸೌಮ್ಯ ಪ್ರತಿಜ್ಞಾವಿಧಿ ಬೋಧಿಸಿದರು. ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಸ್ವಾಗತಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.







