ಫ್ರಾನ್ಸ್ ಭೇಟಿ ಆಮಂತ್ರಣ ಸ್ವೀಕರಿಸಿದ ಹರೀರಿ

ಪ್ಯಾರಿಸ್, ನ. 16: ಸೌದಿ ಅರೇಬಿಯ ಪ್ರವಾಸದಲ್ಲಿರುವಾಗ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿ ಈಗ ಅಲ್ಲೇ ನೆಲೆಸಿರುವ ಲೆಬನಾನ್ ಪ್ರಧಾನಿ ಸಅದ್ ಹರೀರಿ ಫ್ರಾನ್ಸ್‌ಗೆ ಭೇಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷರ ಕಚೇರಿ ಗುರುವಾರ ಹೇಳಿದೆ.
ಮುಂಬರುವ ದಿನಗಳಲ್ಲಿ ಹರೀರಿ ಫ್ರಾನ್ಸ್‌ಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಲೆಬನಾನ್‌ನ ಆಂತರಿಕ ವ್ಯವಹಾರದಲ್ಲಿ ಇರಾನ್ ಮತ್ತು ತನ್ನ ಸರಕಾರದ ಭಾಗೀದಾರಿ ಗುಂಪು ಹಿಝ್ಬುಲ್ಲಾ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿ ಹರೀರಿ ನವೆಂಬರ್ 4ರಂದು ಸೌದಿ ಅರೇಬಿಯದಿಂದಲೇ ತನ್ನ ರಾಜೀನಾಮೆ ಘೋಷಿಸಿದ್ದರು. ಅಂದಿನಿಂದ ಅವರು ಸೌದಿ ಅರೇಬಿಯದಲ್ಲೇ ನೆಲೆಸಿದ್ದಾರೆ.
ಅದೇ ವೇಳೆ, ಹರೀರಿ ಸ್ವದೇಶಕ್ಕೆ ಹಿಂದಿರುಗುವ ಮೊದಲು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗದು ಎಂದು ಲೆಬನಾನ್ ಅಧ್ಯಕ್ಷ ಮೈಕಲ್ ಅವುನ್ ಹೇಳಿದ್ದಾರೆ.
ಸೌದಿ ಅರೇಬಿಯವು ಹರೀರಿಯನ್ನು ಬಂಧನದಲ್ಲಿಟ್ಟಿದೆ ಎಂಬುದಾಗಿ ಆರೋಪಿಸಿರುವ ಲೆಬನಾನ್ ಅಧ್ಯಕ್ಷರು, ಪ್ರಧಾನಿಗೆ ಸ್ವದೇಶಕ್ಕೆ ಮರಳದಿರಲು ಯಾವುದೇ ಕಾರಣವಿಲ್ಲ ಎಂದಿದ್ದಾರೆ.
ಒಂದು ಕಾಲದಲ್ಲಿ ಲೆಬನಾನ್‌ನ ವಸಾಹತು ಆಡಳಿತಗಾರನಾಗಿರುವ ಫ್ರಾನ್ಸ್, ಈ ಬಿಕ್ಕಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ.
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಬುಧವಾರ ಹರೀರಿ ಮತ್ತು ಅವರ ಕುಟುಂಬವನ್ನು ಫ್ರಾನ್ಸ್‌ಗೆ ಆಹ್ವಾನಿಸಿದ್ದಾರೆ. ಲೆಬನಾನ್ ಪ್ರಧಾನಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸೌದಿ ಅರೇಬಿಯದಲ್ಲಿ ಬಂಧಿಸಿಡಲಾಗಿದೆ ಎಂಬ ಆರೋಪವನ್ನು ನಿರಾಕರಿಸುವುದಕ್ಕಾಗಿ ಫ್ರಾನ್ಸ್ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.
ಲೆಬನಾನ್‌ಗೆ ಮರಳುತ್ತೇನೆ: ಹರೀರಿ ಪುನರುಚ್ಚಾರ
ತಾನು ಲೆಬನಾನ್‌ಗೆ ಮರಳುವುದಾಗಿ ಲೆಬನಾನ್ ಪ್ರಧಾನಿ ಸಅದ್ ಹರೀರಿ ಬುಧವಾರ ಪುನರುಚ್ಚರಿಸಿದ್ದಾರೆ.
‘‘ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಹಾಗೂ ದೇವರ ಇಚ್ಚೆಯಿದ್ದರೆ ನಾನು ನನ್ನ ಪ್ರೀತಿಯ ಲೆಬನಾನ್‌ಗೆ ಮರಳುತ್ತೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.







