ನ.19ರಂದು ಲಯನ್ಸ್ ಸಾಂಸ್ಕೃತಿಕ ಸಂಭ್ರಮ ‘ಅಮ್ಮ’
ಮಂಗಳೂರು, ನ.16: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317-ಡಿ ವತಿಯಿಂದ ಲಯನ್ಸ್ ಸಾಂಸ್ಕೃತಿಕ ಸಂಭ್ರಮ ‘ಅಮ್ಮ’ ನ.19ರಂದು ನಗರದ ಲೈಟ್‌ಹೌಸ್ ಹಿಲ್‌ನ ಸಂತ ಅಲೋಶಿಯಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9ಕ್ಕೆ ದೀಪ ಪ್ರಜ್ವಲನದೊಂದಿಗೆ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಎಚ್.ಆರ್. ಹರೀಶ್ ಅವರು ಸೇವಾ ಕಾರ್ಯಕ್ರಮ ಮತ್ತು ಸೇವಾ ಪ್ರೇರಣಾ ಪುರಸ್ಕಾರ ಸಮಾರಂಭ ಉದ್ಘಾಟಿಸುವರು ಎಂದು ಲಯನ್ಸ್ ಸಾಂಸ್ಕೃತಿಕ ಹಬ್ಬಗಳ ಪ್ರಧಾನ ಸಂಯೋಜಕ ದಾಮೋದರ ಬಿ.ಎಂ. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಈ ಸಂದರ್ಭ ಸೇವಾ ಪ್ರೇರಣಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಸೇವಾ ಕ್ಷೇತ್ರದಲ್ಲಿ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಸಂಸ್ಥಾಪಕಿ ಹಿಲ್ಡಾ ರಾಯಪ್ಪನ್ ಅವರಿಗೆ ಲಯನ್ಸ್ ಸೇವಾ ಸಾಮ್ರಾಟ್, ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರಿಗೆ ಲಯನ್ಸ್ ಮಾಧ್ಯಮ ಸಾಮ್ರಾಟ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಲಯನ್ಸ್ ವೈದ್ಯ ಸಾಮ್ರಾಟ್, ಸಂಘಟನಾ ಕ್ಷೇತ್ರದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗಾ ಅವರಿಗೆ ಲಯನ್ಸ್ ಸಂಘಟನಾ ಸಾಮ್ರಾಟ್, ಕಲಾ ಕ್ಷೇತ್ರದಲ್ಲಿ ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಕಾರಿ ಕದ್ರಿ ನವನೀತ ಶೆಟ್ಟಿ ಅವರಿಗೆ ಲಯನ್ಸ್ ಕಲಾ ಸಾಮ್ರಾಟ್ ಬಿರುದು ನೀಡಿ ಪುರಸ್ಕರಿಸಲಾಗುವುದು ಎಂದರು.
ಅಂದು ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದ.ಕ. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆ ಒಳಗೊಂಡ ಲಯನ್ಸ್ ಜಿಲ್ಲೆಯ 18ತಂಡಗಳು ನೋಂದಣಿ ಮಾಡಿಕೊಂಡಿವೆ. ಬಂಟ್ವಾಳದ ಲಯನ್ಸ್ ವಿಕಲಚೇತನರ ಪಾಲನಾ ಕೇಂದ್ರಕ್ಕೆ ಡೊನಾಲ್ಡ್ ಬಂಟ್ವಾಳ ಅವರು ದಾನವಾಗಿ ನೀಡಿದ 15.5 ಲಕ್ಷ ರೂ. ವೆಚ್ಚದ ಶಾಲಾ ಬಸ್‌ನ್ನು ಈ ಸಂದರ್ಭ ಹಸ್ತಾಂತರಿಸಲಾಗುವುದು ಎಂದರು.
ಲಯನ್ಸ್ ಜಿಲ್ಲಾ ದ್ವಿತೀಯ ಉಪ ಗವರ್ನರ್ ರೊನಾಲ್ಡ್ ಐ. ಗೋಮ್ಸ್, ಸಾಂಸ್ಕೃತಿಕ ಹಬ್ಬಗಳ ಸಹ ಸಂಯೋಜಕ ಡೊನಾಲ್ಡ್ ಬಂಟ್ವಾಳ್, ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ, ವೇಣಿ ಮರೋಳಿ ಉಪಸ್ಥಿತರಿದ್ದರು.







