ಕಾರ್ಪೊರೇಟರ್ ಅಝೀಝ್ ರಿಗೆ ಬೆದರಿಕೆಯ ಕರೆ: ದೂರು

ಮಂಗಳೂರು, ನ. 16: ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಅಝೀಝ್ ಕುದ್ರೋಳಿ ಅವರಿಗೆ ವ್ಯಕ್ತಿಯೊಬ್ಬರು ಬೆದರಿಕೆ ಒಡ್ಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುದ್ರೋಳಿಯ ನಿವಾಸಿ ನೌಶಾದ್ ಯಾನೆ ಪ್ರಭಾಕರ ನೌಶಾದ್ ಎಂಬಾತನ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುದ್ರೋಳಿ ವಾರ್ಡ್‌ನ ಸದಸ್ಯರಾಗಿರುವ ಅಝೀಝ್ ಅವರು ಪಾಲಿಕೆಯಿಂದ ಬಿಡುಗೊಂಡ ಅನುದಾನದಲ್ಲಿ ಕಂಡತ್‌ಪಳ್ಳಿಯಿಂದ ಕುದ್ರೋಳಿವರೆಗಿನ ರಸ್ತೆಗೆ ದುರಸ್ತಿ ಕಾರ್ಯ ಕೈಗೊಂಡಿದ್ದರು. ಇದನ್ನು ಶಾಸಕ ಲೋಬೊ ಅವರ ಶಾಸಕ ನಿಧಿಯಿಂದ ಕಾಮಗಾರಿ ಕೈಗೊಂಡಿರುವುದಾಗಿ ಅಪಪ್ರಚಾರ ನಡೆಸಿದ್ದಾರೆ ಎಂದು ಅಝೀಝ್ ಆರೋಪಿಸಿದ್ದಾರೆ.
ಕಾಂಗ್ರೆಸ್‌ನ ಕೆಲವರು ವಾರ್ಡ್‌ನಲ್ಲಿ ಸುಳ್ಳು ಸುದ್ದಿಯನ್ನು ಹರಡಿ ಜನರಲ್ಲಿ ಗೊಂದರ ಸೃಷ್ಟಿಸುತ್ತಿರುವುದರಿಂದ ಸಾರ್ವಜನಿಕರೆದುರೇ ಗುತ್ತಿಗೆದಾರ ಮತ್ತು ಎಂಜಿನಿಯರ್‌ರನ್ನು ಕರೆದು ಪ್ರಶ್ನಿಸಿದಾಗ ಅವರು ಪಾಲಿಕೆಯ ಅನುದಾನದಿಂದಲೇ ಕಾಮಗಾರಿಯನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಕೆರಳಿದ ಕುದ್ರೋಳಿಯ ನೌಶಾದ್ ಯಾನೆ ಪ್ರಭಾಕರ ನೌಶಾದ್ ಎಂಬಾತ ತನಗೆ ಕರೆ ಮಾಡಿ ‘‘ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದು, ನನ್ನ ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಅಝೀಝ್ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







