ವೈದ್ಯರ ಮುಷ್ಕರ: ಮಂಗಳೂರಿನಲ್ಲಿ ರೋಗಿ ಮೃತ್ಯು
ಮಂಗಳೂರು, ನ. 16: ರಾಜ್ಯಾದ್ಯಂತ ವೈದ್ಯರ ಮುಷ್ಕರ ಮುಂದುವರಿದಿರುವಂತೆಯೇ ದ.ಕ. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಆದರೆ, ರೋಗಿಯ ಸಾವಿಗೂ ಮುಷ್ಕರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಾಗಲಕೋಟೆ ಜಿಲ್ಲೆಯ ಚಂದ್ರಶೇಖರ (36) ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ನ್ಯೂಮೇನಿಯಾದಿಂದ ಬಳಲುತ್ತಿದ್ದ ಚಂದ್ರಶೇಖರ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ರೋಗಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಐಸಿಯುನಲ್ಲಿ ಹಾಸಿಗೆ ಖಾಲಿ ಇಲ್ಲದೇ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿತ್ತು ಎಂದು ಆಸ್ಪತ್ರೆ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಅನಂತರ ಚಂದ್ರಶೇಖರ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಳು ಎಂದಿನಂತೆ ಲಭ್ಯವಿದ್ದು, ಹೊರ ರೋಗಿಗಳ ವಿಭಾಗವನ್ನು ಮಾತ್ರ ಮುಚ್ಚಲಾಗಿದೆ. ಚಂದ್ರಶೇಖರ್ ಅವರನ್ನು ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.





