ಮಾಧ್ಯಮಗಳು ಪ್ರಜಾಪ್ರಭುತ್ವದ ಜೀವನಾಡಿ: ನ್ಯಾ.ಕೋರಡ್ಡಿ

ಚಿಕ್ಕಬಳ್ಳಾಪುರ, ನ.16: ಮಾಧ್ಯಮಗಳು ಪ್ರಜಾ ಪ್ರಭುತ್ವದ ಜೀವನಾಡಿಯಂತಿದ್ದು, ಮಾಧ್ಯಮಗಳು ಜನರಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್ ಕೋರಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಅಂಗವಾಗಿ ಸ್ಥಳೀಯ ಟಿ.ವಿ ಮತ್ತು ಮಾಧ್ಯಮದಲ್ಲಿ ಕಾನೂನು ಸೇವೆಗಳ ಬಗ್ಗೆ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನತೆಯ ಮೇಲೆ ಪ್ರಭಾವಶಾಲಿಯಾಗಿ ಪರಿಣಾಮ ಬೀರುವ ಮಾಧ್ಯಮಗಳು ಕಾನೂನುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ನಿರ್ಮಿಸಿ, ಸಮಾಜದ ಏಳಿಗೆಗೆ ದುಡಿಯಬೇಕೆಂದರು.
ಮಹಿಳೆಯರು ಮತ್ತು ಮಕ್ಕಳು, ಕೈಗಾರಿಕಾ ಕಾರ್ಮಿಕರು, ಅಂಗವಿಕಲ ವ್ಯಕ್ತಿಗಳು, ನೈಸರ್ಗಿಕ ವಿಕೋಪ, ಕೋಮು ಗಲಭೆ, ಕೈಗಾರಿಕಾ ಆಪತ್ತುಗಳಲ್ಲಿ ಬಾಧಿತರು, ಸ್ವಾಧೀನತೆಯಲ್ಲಿರುವ ವ್ಯಕ್ತಿಗಳು, ವಾರ್ಷಿಕ 1 ಲಕ್ಷಕ್ಕಿಂತ ಕಡಿಮೆಯಿರುವ ವ್ಯಕ್ತಿಗಳು, ಮಾನವ ಕಳ್ಳ ಸಾಗಾಣಿಕೆ ಅಥವಾ ಬೇಗಾರ ಪೀಡಿತರು ಸೇರಿದಂತೆ ಮತ್ತಿತರರು ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು, ತಾಲೂಕು ಅಥವಾ ಉಪವಿಭಾಗೀಯ ಕಾನೂನು ಸೇವೆಗಳ ಸಮಿತಿಗಳಿಂದ ಉಚಿತ ಕಾನೂನು ಸೇವೆಗಳನ್ನು ಪಡೆಯಬಹುದೆಂದು ತಿಳಿಸಿದರು.
ಈ ಸಂದರ್ಭದಲಿ 1ನೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್, 2ನೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್, 1ನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎಂ ಅರುಟಗಿ, 2ನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ಎಂ ಶೈಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







