ಕೊಂಕಣಿ, ಭಾಷೆ, ಸಂಸ್ಕೃತಿ ಅಭಿವೃದ್ದಿಯಲ್ಲಿ ಯುವಜನತೆ ಪಾತ್ರ ಅಗತ್ಯ: ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ

ಮಂಗಳೂರು, ನ. 16: ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಕಲೆಯ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಕರ್ನಾಟಕ ಕೊಂಕಣಿ ಅಕಾಡಮಿ ಅಧ್ಯಕ್ಷ ಆರ್.ಪಿ. ನಾಯ್ಕ ದಾಂಡೇಲಿ ಹೇಳಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ನಡೆದ ಕೊಂಕಣಿ ಮಾನ್ಯತಾ ರಜತ ವರ್ಷಾಚರಣೆ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಂಕಣಿ ಅಕಾಡಮಿಯು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಮಕ್ಕಳ ದಿನಾಚರಣೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ದಾಂಡೇಲಿ ಹಾಗೂ ಕಾರವಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ಅವರು ಹೇಳಿದರು.
ಗುಮಟೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕೊಂಕಣಿ ಅಕಾಡಮಿಗೆ ಸ್ವಂತ ಕಚೇರಿಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಕೊಂಕಣಿ ಅಕಾಡಮಿಯ ಮೂಲಕ ನಡೆಯುತ್ತಿರುವ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಎರಿಕ್ ಒಝೇರಿಯೋ, ರೋಯ್ ಕ್ಯಾಸ್ಟೋಲಿನೋ ಉಪಸ್ಥಿತರಿದ್ದರು.
ಕೊಂಕಣಿ ಅಕಾಡಮಿ ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.
ಅಲೋಶಿಯಸ್ ಪ್ರಥಮ, ಕಪಿತಾನಿಯೊ ದ್ವಿತೀಯ: ಈ ಸಂದರ್ಭ ಕೊಂಕಣಿ ಮಕ್ಕಳ ದಿನಾಚರಣೆಯ ಪ್ರತಿಭಾ ಪುರಸ್ಕಾರದಲ್ಲಿ ಪ್ರಥಮ ಬಹುಮಾನ ಅಲೋಶಿಯಸ್ ಕಾಲೇಜು ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಕಪಿತಾನಿಯೊ ಕಾಲೇಜು ಪಡೆದುಕೊಂಡಿತು.







