ಪ್ರತಿಯೊಬ್ಬರ ಜೀವನದಲ್ಲಿ ವಿಜ್ಞಾನ ಅತ್ಯವಶ್ಯಕ: ರಮೇಶ್
.jpg)
ದಾವಣಗೆರೆ, ನ.16: ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಪ್ರತಿಯೊಬ್ಬರ ಜೀವನದಲ್ಲಿ ಅತ್ಯವಶ್ಯಕವಾಗಿದೆ. ಜೀವನದಲ್ಲಿ ಅಗತ್ಯತೆ ಇರುವ ಬಗ್ಗೆ ನಮಗೆ ಗೊತ್ತಿಲ್ಲದೆ ವಿಜ್ಞಾನದ ಕಲಿಕೆಯಲ್ಲಿ ತೋಡಗಿದ್ದೇವೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಕಾರ್ಯಕ್ರಮವನ್ನು ರಾಕೆಟ್ ಉಡಾವಣೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವ್ಯಕ್ತಿ ಹುಟ್ಟಿದಾಗಿನಿಂದಲೂ ಸಾಯುವರೆಗೂ ಏನೆಲ್ಲಾ ನೋಡುತ್ತೇವೋ ಅಥವಾ ಮಾಡುತ್ತೇವೋ ಅದೆಲ್ಲ ವಿಜ್ಞಾನದ ಒಂದು ಅಂಗ. ಅದರೆ, ನಮಗೆ ಅದರ ಅರಿವೇ ಇರುವುದಿಲ್ಲ ಎಂದರು.
ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡು ಒಂದೇ ಆಗಿದ್ದು, ಒಂದೆಡೆ ಶಾಂತಿಯನ್ನು ಹುಡುವುದಕ್ಕೆ ಆಧ್ಯಾತ್ಮಿಕ ಕಡೆ ವಾಲುತ್ತೇವೆ. ಅದೇ ರೀತಿ, ಇರುವುದರಲ್ಲಿಯೇ ಸಂತೋಷ ಕಂಡುಕೊಳ್ಳುವುದು ವಿಜ್ಞಾನವಾಗಿದೆ. ವಿಜ್ಞಾನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಆಧಿಕ ಅವಕಾಶಗಳು ದೊರೆಯುವ ಜತೆಗೆ ಹೊಸ ಪ್ರಯತ್ನ ಮಾಡಿದಾಗಲೆಲ್ಲಾ ಮನಸ್ಸು ಅರುಳುತ್ತವೆ ಎಂದರು.
ಜಿಪಂ ಅಧ್ಯಕ್ಷೆ ಗೀತಾ ಗಂಗಾನಾಯ್ಕ್ ಮಾತನಾಡಿ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಯಲ್ಲಿ ತೊಡಗಿಕೊಂಡು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಿಕೆಯಿಂದ ಮನಸ್ಸು ಸಂತೋಷಗೊಂಡು ಹೊಸ ಸಂಶೋಧನೆ ಕಡೆ ಯೋಚಿಸುವಂತಹ ಬುದ್ಧಿ ಸಾಮಥ್ರ್ಯ ಹೆಚ್ಚಾಗುತ್ತದೆ ಎಂದ ಅವರು, ಇಂದಿನ ವಿದ್ಯಾರ್ಥಿಗಳು ಮುಂದಿನ ವಿಜ್ಞಾನಿಗಳಾಗಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಬೇಕು. ವಸ್ತು ಪ್ರದರ್ಶನದಲ್ಲಿ ತೀರ್ಪುಗಾರರು ಯಾವುದೇ ಪಕ್ಷಪಾತ ಮಾಡದೆ ನ್ಯಾಯಯುತ ತೀರ್ಪು ನೀಡಿ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಜಿಲ್ಲೆ ಕೀರ್ತಿ ತರಬೇಕು ಎಂದು ಹೇಳಿದರು.
ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆರೋಗ್ಯ ಮತ್ತು ಯೋಗಕ್ಷೇಮ, ಸಂಪನ್ಮೂಲ ನಿರ್ವಹಣೆ ಮತ್ತು ಆಹಾರ, ತ್ಯಾಜ್ಯ ನಿರ್ವಹಣೆ ಹಾಗೂ ನೀರಿನ ಅಗರ ಸಂರಕ್ಷಣೆ, ಸಾರಿಗೆ ಮತ್ತು ಸಂಪರ್ಕ, ಡಿಜಿಟಲ್ ಮತ್ತು ತಂತ್ರಜ್ಞಾನ, ಗಣಿತ ಶಾಸ್ತ್ರದಿಂದ ವಿನ್ಯಾಸ ಗೊಳಿಸುವಿಕೆ, ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ವಸ್ತು ಪ್ರದರ್ಶನ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್ ಮಾತನಾಡಿದರು. ಜಿಪಂ ಸದಸ್ಯೆ ಶೈಲಾ ಬಸವರಾಜ್, ಸದಸ್ಯೆ ಅರ್ಚನ ಬಸವರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಲಿಂಗರಾಜು, ಸಿದ್ದಗಂಗಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಸಿದ್ದಗಂಗಾ ಶಾಲೆಯ ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜಾ, ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.







