ಭಾರತ ಟೆಸ್ಟ್ ತಂಡದಿಂದ ಇಶಾಂತ್ ಬಿಡುಗಡೆ
ಹೊಸದಿಲ್ಲಿ, ನ.16: ಶ್ರೀಲಂಕಾ ವಿರುದ್ಧ ಭಾರತ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗದ ಬೌಲರ್ ಇಶಾಂತ್ ಶರ್ಮಗೆ ತವರು ರಾಜ್ಯ ದಿಲ್ಲಿ ಪರ ರಣಜಿ ಪಂದ್ಯವನ್ನಾಡಲು ಅವಕಾಶ ನೀಡುವ ಉದ್ದೇಶದಿಂದ ಟೀಮ್ ಇಂಡಿಯಾದಿಂದ ಬಿಡುಗಡೆಗೊಳಿಸಲಾಗಿದೆ.
ಇಶಾಂತ್ ಗುರುವಾರ ಕೋಲ್ಕತಾದಲ್ಲಿ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇಶಾಂತ್ ಶುಕ್ರವಾರ ಮಹಾರಾಷ್ಟ್ರದ ವಿರುದ್ಧ ಪಾಲಂನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ದಿಲ್ಲಿ ತಂಡದಲ್ಲಿ ಆಡಲಿದ್ದಾರೆ. ಈವರ್ಷದ ರಣಜಿಯ ಮೊದಲ 3 ಪಂದ್ಯಗಳಲ್ಲಿ ದಿಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಇಶಾಂತ್ 6 ಇನಿಂಗ್ಸ್‌ಗಳಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಟೀಮ್ ಮ್ಯಾನೇಜ್‌ಮೆಂಟ್‌ನ ನಿಯಮದ ಪ್ರಕಾರ ಆಟಗಾರ ಟೆಸ್ಟ್ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲು ಮರಳಿ ಕಳುಹಿಸಲಾಗುತ್ತದೆ. ‘‘ಇಶಾಂತ್ ಸಂಜೆ ದಿಲ್ಲಿ ತಂಡವನ್ನು ಮುನ್ನಡೆಸಲಿದ್ದು, ರಿಷಬ್ ಪಂತ್ ಉಪನಾಯಕನಾಗಿದ್ದಾರೆ. ಇಶಾಂತ್ ನ.24 ರಿಂದ ಆರಂಭವಾಗಲಿರುವ 2ನೆ ಟೆಸ್ಟ್‌ನ ವೇಳೆ ಟೀಮ್ ಇಂಡಿಯವನ್ನು ಸೇರಿಕೊಳ್ಳಲಿದ್ದಾರೆ’’ಎಂದು ದಿಲ್ಲಿ ಟೀಮ್ ಮ್ಯಾನೇಜರ್ ಶಂಕರ್ ಸೈನಿ ಹೇಳಿದ್ದಾರೆ.







