ಹೋರಿ ಬೆದರಿಸುವ ಸ್ಪರ್ಧೆಗೆ ನಿಷೇಧ: ಎಸ್ಪಿ
ಶಿವಮೊಗ್ಗ, ನ.16: ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಸ್ಪರ್ಧೆ ನಡೆಸದಂತೆ ಆದೇಶಿಸಲಾಗಿದೆ. ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಇದಕ್ಕೆ ಪರವಾನಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಮಟ್ಕಾ, ಜೂಜು ಮತ್ತು ಗಾಂಜಾ ವ್ಯವಹಾರ ಹೆಚ್ಚುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಉಪಸ್ಥಿತರಿದ್ದ ಐಜಿಪಿ ಎಂ.ಎ. ಸಲೀಂ ಮಾತನಾಡಿ, ಮಟ್ಕಾ ಬಿಡ್ಡರ್‌ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆದರೂ ಮತ್ತೆ ಹೊಸಬರು ಬರುತ್ತಿದ್ದಾರೆ, ಸೂಕ್ತ ಮಾಹಿತಿ ಕಲೆಹಾಕಿ ಅವರನ್ನು ಮಟ್ಟಹಾಕುವ ಕೆಲಸಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ಗಾಂಜಾ ನಿಯಂತ್ರಣದಬಗ್ಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಇಂಥಹ ಕ್ರಮವನ್ನು ಇನ್ನೂ ಮುಂದುವರಿಸ ಲಾಗುವುದು ಎಂದು ಹೇಳಿದರು.
ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ನಗರವನ್ನು ಬಿಟ್ಟರೆ ರಾಜ್ಯದಲ್ಲಿ ಶಿವಮೊಗ್ಗ ಮೊದಲನೆ ಸ್ಥಾನದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉತ್ತಮ ವಾಗಿದೆ. ಪೊಲೀಸರು ಕೈಗೊಳ್ಳುತ್ತಿರುವ ಹೊಸ ವಿಧಾನಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿರುವುದರಿಂದ ಅಪರಾಧಿಗಳನ್ನು ಮಟ್ಟಹಾಕಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಅತಿಹೆಚ್ಚು ಪ್ರಮಾಣದಲ್ಲಿ ಅಪರಾಧಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.







