ದುಃಖದಲ್ಲಿ ಸುಖ
ಬ್ರಾಹ್ಮಣ ಸಾಮಾಜಿಕ ಚಳವಳಿಗಳಲ್ಲೂ ಪಾಲ್ಗೊಳ್ಳುತ್ತಾರೆ, ವಿಧವಾವಿವಾಹ, ಬಾಲ್ಯವಿವಾಹ, ಕೇಶವಪನದಂತಹ ಸಾಮಾಜಿಕ ಪ್ರಶ್ನೆಗಳ ಬಗ್ಗೆ ಅವರು ಆಸ್ಥೆ ತೋರಿಸಿದ್ದಾರೆ. ಕಾರ್ಮಿಕರ ವತಿಯಿಂದ ಬಂಡವಾಳ ಶಾಹಿಗಳ ಜೊತೆ ವಾದ ಮಾಡುವ ಚಳವಳಿಯ ಪುರಸ್ಕೃತರಾಗುತ್ತಾರೆ ಅವರು, ಅಷ್ಟೇಯಲ್ಲ ಬೋಲ್ಶೇವಿಝಮ್ ಹಾಗೂ ಕಮ್ಯುನಿಝಂನಂತಹ ಆರ್ಥಿಕ ಹಿತಸಂಬಂಧದಲ್ಲಿ ಕ್ರಾಂತಿ ತರುವಂತಹ ಚಳವಳಿಗಳನ್ನು ಈ ದೇಶದಲ್ಲಿ ತಂದು ಅವುಗಳು ಸಫಲವಾಗಲು ಈ ಬ್ರಾಹ್ಮಣರೇ ಕಾರಣರು. ಹೀಗಿರುವಾಗ ಕೇವಲ ಬ್ರಾಹ್ಮಣ ನಿಲುವನ್ನು ನಾಶ ಮಾಡುವ ಶುಭ ಕಾರ್ಯದಲ್ಲಿ ಮಾತ್ರ ಭಾಗವಹಿಸಲು ಅವರು ಇಷ್ಟಪಡುತ್ತಿಲ್ಲ. ಅಷ್ಟೇ ಅಲ್ಲ ಬ್ರಾಹ್ಮಣ ನಿಲುವಿನಿಂದಾಗುತ್ತಿರುವ ಅನಿಷ್ಟ ಪರಿಣಾಮಗಳ ಬಗ್ಗೆ ಯಾರಾದರೂ ಬ್ರಾಹ್ಮಣರನ್ನೇ ಜವಾಬ್ದಾರರನ್ನಾಗಿಸಿದರೆ ‘ಯಾರಿಗೆ ನೋಡಿದರೂ ಬ್ರಾಹ್ಮಣರ ಮೇಲೇಕೆ ಕಣ್ಣು?’ ಎಂದು ಎದುರು ಸವಾಲು ಹಾಕುತ್ತಾರೆ.
‘‘ಬ್ರಾಹ್ಮಣರಿಗೆ ಪ್ರಾಪ್ತವಾಗಿರುವ ವರ್ಚಸ್ಸು ಕೇವಲ ಅವರ ಕರಾಮತ್ತಿನಿಂದ ಮಾತ್ರ.... ಬುದ್ಧಿ ಹಾಗೂ ಸಾಮರ್ಥ್ಯವಿರುವವನಿಗೆ ಉಳಿದವರ ಮೇಲೆ ತನ್ನ ವರ್ಚಸ್ಸನ್ನು ಹೇರಬೇಕೆನಿಸುತ್ತದೆ ಹಾಗೂ ಆ ವರ್ಚಸ್ಸನ್ನು ಹೇರುವುದು ಕೂಡ ಆತನಿಗೆ ಗೊತ್ತಿರುತ್ತದೆ.... ಬ್ರಾಹ್ಮಣರು ಧರ್ಮದ ಮೇಲೆ ವರ್ಚಸ್ಸು ಪಡೆದಿರುವುದು ಉಳಿದವರ ಕತ್ತು ಹಿಸುಕಿಯೋ ಇಲ್ಲ ತಲೆ ಎಗರಿಸಿಯೋ ಅಲ್ಲ, ತಮ್ಮ ಮನಸ್ಸಿನ ಸಾಮರ್ಥ್ಯದಿಂದ ಬೇರೆ ಜಾತಿಯವರಿಗೆ ಅಜ್ಞಾನದ ಅಂಧಃಕಾರದಲ್ಲಿ ಒದ್ದಾಡುತ್ತ ನೋವುಣ್ಣುವಂತೆ ಮಾಡಿದರು.... ಇದು ಸಹಜ.... ಸಾಕಷ್ಟು ಬುದ್ಧಿಯಿರುವಾಗ ಯಾವನು ತಾನೇ ಅದರಿಂದ ತಮ್ಮ ಹಿತವನ್ನು ಸಾಧಿಸದೆ ಇದ್ದಾನು? ಒಬ್ಬನ ಅಜ್ಞಾನದ ಲಾಭ ಮತ್ತೊಬ್ಬನಿಗೆ ಸಿಗಲಿಲ್ಲ ಎಂದು ಯಾವತ್ತಾದರೂ ಆದದ್ದಿದೆಯೇ? ಧರ್ಮದ ಕೀಲಿ ಕೈಗೆ ಬಂದೊಡನೆ ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಸಾಧ್ಯವಾದನಂತರ ಧರ್ಮಾಧಿಕಾರಿಗಳು ಪ್ರತಿಯೊಬ್ಬನ ಮೇಲೆ ತನ್ನ ಅಧಿಕಾರ ಚಲಾಯಿಸಿದ ಉದಾಹರಣೆ ಪ್ರತಿಯೊಂದು ದೇಶದ ಇತಿಹಾಸದಲ್ಲಿ ಸಿಗುತ್ತದೆ. ಸಾಮರ್ಥ್ಯವಿರುವವನು ಬಲಹೀನರ ಕಿವಿ ಹಿಂಡುತ್ತಾನೆ ಅನ್ನುವುದೇ ಜಗತ್ತಿನ ರೀತಿ.....’’
ಬ್ರಾಹ್ಮಣರ ಸ್ವಾರ್ಥ ಧೋರಣೆಯನ್ನು ಸಮರ್ಥಿಸಲು ಕೇಸರಿಯಂತಹ ದೊಡ್ಡ ಪತ್ರಿಕೆಯವರು ಒಬ್ಬ ಧರ್ಮಲಂಡನಂತಹ ಭಾಷೆಯನ್ನು ಯಾರಿಗೂ ಬಗ್ಗದೆ ಉಪಯೋಗಿಸಿದ್ದಾರೆ (ಕೇಸರಿ ದಿ.15 ಹಾಗೂ 22 ಮಾರ್ಚ್ 1874, ಸುವಿಚಾರ ಪ್ರಕಾಶನ ಮಂಡಳಿ, ಪುಣೆ, ನಾಗಪೂರ್, ಪುಟ 175-180) ಮಹಾಡ ಪ್ರಕರಣದಲ್ಲಿ ನಾವು ಶೇಟಜಿ (ಮಾರವಾಡಿಗಳು), ಭಡಜಿ (ಬ್ರಾಹ್ಮಣರು)ಗಳ ತಪ್ಪನ್ನು ತೋರಿಸಿದ್ದಾಗ ಕೂಡ ಅಸ್ಪಶ್ಯತೆಯನ್ನು ನಿವಾರಿಸುವ ಜವಾಬ್ದಾರಿಯನ್ನೇನು ಬ್ರಾಹ್ಮಣರೇ ಹೊತ್ತಿದ್ದಾರೆಯೇ? ಅನ್ನುವಂತಹ ಎದುರು ಸವಾಲನ್ನವರು ನಮಗೆ ಕೇಳಿದ್ದರು. ಬ್ರಾಹ್ಮಣರು ನಮ್ಮ ಹಿತ ಕೆಲಸವೊಂದನ್ನು ಮಾಡದಿದ್ದ ಪಕ್ಷದಲ್ಲಿ ಅವರ ದೋಷವನ್ನು ತೋರಿಸುವ ಅಧಿಕಾರ ನಮಗಿಲ್ಲ ಅನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ಬ್ರಾಹ್ಮಣರು ಸರ್ವಜನತೆಯ ನಾಯಕರು ಎಂದು ತಿಳಿದುಕೊಂಡೇ ನಾವು ಬ್ರಾಹ್ಮಣರ ಮೇಲೆ ಆರೋಪ ಮಾಡಿದ್ದು.
ನಮ್ಮ ಅನಿಸಿಕೆಯಂತೆ ಸಮಾಜದ ರಚನೆ, ಜೊತೆಗೆ ಅದರ ಉನ್ನತಿ ಇಲ್ಲವೆ ಅವನತಿ ಸಾಕಷ್ಟು ಪ್ರಮಾಣದಲ್ಲಿ ನಾಯಕರು ಜನತೆಗೆ ಯಾವ ಪಾಠ ಹೇಳುತ್ತಾರೆ ಅನ್ನುವುದನ್ನು ಅವಲಂಬಿಸಿದೆ. ನಾಯಕರ ಪಾಠದಿಂದಲೇ ಸಮಾಜಕ್ಕೆ ಶಿಸ್ತು ಬರುತ್ತದೆ. ಹಾಗಾಗಿ ಸಮಾಜದ ಒಳ್ಳೆಯ ಕೆಟ್ಟ ಗುಣಗಳಿಗೆ ನಾಯಕರೇ ಜವಾಬ್ದಾರರಾಗಿರುತ್ತಾರೆ. ಹಾಗೆಯೇ ಕೆಲವು ಸಮಾಜವನ್ನು ಸಾಮಾನ್ಯವಾಗಿಯೂ ಕೆಲವು ಸಮಾಜವನ್ನು ಅಸಾಮಾನ್ಯವಾಗಿಯೂ ಪರಿಗಣಿಸಲಾಗುತ್ತದೆ. ಒಬ್ಬ ಸಾಮಾನ್ಯ ಹಾಗೂ ಅಸಾಮಾನ್ಯ ವ್ಯಕ್ತಿಯ ನಡುವೆ ಕಲಹ ಆರಂಭವಾದರೆ ಅದನ್ನು ನಿಲ್ಲಿಸುವ ಜವಾಬ್ದಾರಿ ಅಸಾಮಾನ್ಯ ಮನುಷ್ಯನ ಹೆಗಲಿಗೇ ಹೇರಲಾಗುತ್ತದೆ. ಅದೇ ನ್ಯಾಯದಿಂದ ಬ್ರಾಹ್ಮಣ ಬ್ರಾಹ್ಮಣೇತರರಲ್ಲಿ ಆರಂಭವಾಗಿರುವ ವಾದವನ್ನು ಮುಗಿಸುವ ಜವಾಬ್ದಾರಿ ಬ್ರಾಹ್ಮಣರ ಮೇಲೆಯೇ ಇದೆ. ಏಕೆಂದರೆ ಹಿಂದೂ ಸಮಾಜದ ನಾಯಕತ್ವ ಪ್ರಾಚೀನಕಾಲದಿಂದ ಬ್ರಾಹ್ಮಣರಲ್ಲಿಯೇ ಇದೆ ಅನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಹಾಗಾಗಿ ಈ ನಾಯಕತ್ವದ ಅನುಸಾರ ಬ್ರಾಹ್ಮಣರ ಮೇಲಿರುವ ಜವಾಬ್ದಾರಿಯನ್ನವರು ಸರಿಯಾಗಿ ಪೂರೈಸದಿದ್ದರೆ ಅವರ ಮೇಲಿರುವ ಅರೋಪವನ್ನವರು ಸುಳ್ಳೆಂದು ಯಾವತ್ತೂ ಹೇಳುವಂತಿಲ್ಲ. ಇವರು ಹಿಂದೂ ಸಮಾಜದ ನಾಯಕರು, ಬ್ರಾಹ್ಮಣ ಜಾತಿಗೆ ಗೌರವ ಬೇಕಿದ್ದರೆ ಅವರು ತಮ್ಮ ಜವಾಬ್ದಾರಿಯನ್ನು ಗುರುತಿಸಬೇಕು ಹಾಗೂ ಜವಾಬ್ದಾರಿ ಬೇಡದಿದ್ದರೆ ನಾಯಕತ್ವವನ್ನು ಬಿಟ್ಟು ಶೂದ್ರರಲ್ಲೋ ಅತಿಶೂದ್ರರಲ್ಲೋ ಸೇರಿಕೊಳ್ಳಬೇಕು. ಇಲ್ಲದಿದ್ದರೆ ಅವರ ಮೇಲಿರುವ ದೋಷಾರೋಪಗಳು ಕಡಿಮೆಯಾಗಲಾರವು.
ಈ ವಿಷಯದಲ್ಲಿ ನಾವು ಬ್ರಾಹ್ಮಣರನ್ನೇ ಏಕೆ ಜವಾಬ್ದಾರರೆನ್ನುವುದು ಅನ್ನುವುದರ ವಿವರಣೆ ಇಲ್ಲಿಯವರೆಗೆ ಕೊಟ್ಟೆವು, ಈಗ ಅದರ ಜೊತೆ ಇನ್ನೊಂದು ಪ್ರಶ್ನೆಯೂ ಉದ್ಭವಿಸುತ್ತದೆ, ಒಂದು ಪಕ್ಷ ಬ್ರಾಹ್ಮಣರು ಬ್ರಾಹ್ಮಣ ನಿಲುವನ್ನು ನಾಶ ಮಾಡಲು ಮುಂದಾಗಿದ್ದರೆ ಬೇರೆ ಯಾರೂ ಇದರ ಬಗ್ಗೆ ಏನೂ ಮಾಡಬಾರದೆ? ಅನ್ನುವುದು. ನನಗನಿಸಿದ ಮಟ್ಟಿಗೆ ಬ್ರಾಹ್ಮಣ ನಿಲುವಿನ ನಾಶದ ಜವಾಬ್ದಾರಿ ಎಲ್ಲರ ಮೇಲೂ ಸಮನಾಗಿ ಇಲ್ಲದಿದ್ದರೂ ಯಾವುದೇ ಜಾತಿ ಈ ಜವಾಬ್ದಾರಿಯಿಂದ ತನ್ನನ್ನು ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಬ್ರಾಹ್ಮಣ ನಿಲುವು ಅನ್ನುವುದು ಸರ್ವವ್ಯಾಪಿ ಪರಮೇಶ್ವರನಂತೆ ಭಾರತದ ಚರಾಚರ ಸೃಷ್ಟಿಯನ್ನು ವ್ಯಾಪಿಸಿಕೊಂಡಿದೆ. ಸಾಕಷ್ಟು ಅಸ್ಪಶ್ಯರು, ಅಸಂಖ್ಯ ಬ್ರಾಹ್ಮಣೇತರರು ಹಾಗೂ ಅಗಣಿತ ಬ್ರಾಹ್ಮಣರು ತಿಳಿದೋ ತಿಳಿಯದೆಯೋ ಈ ಬ್ರಾಹ್ಮಣ ನಿಲುವಿನ ಉಪಾಸಕರಾಗಿದ್ದಾರೆ. ಬ್ರಾಹ್ಮಣ, ಬ್ರಾಹ್ಮಣೇತರ ಹಾಗೂ ಅಸ್ಪಶ್ಯರು ಇವರು ಬ್ರಾಹ್ಮಣ ನಿಲುವಿನಿಂದ ತುಂಬಿರುವ ಒಂದರ ಮೇಲೆ ಒಂದು ಪೇರಿಸಿಟ್ಟಿರುವ ಗಡಿಗಳಂತೆ. ದಲಿತರ ಹೆಗಲ ಮೇಲೆ ಬ್ರಾಹ್ಮಣೇತರರು ಹಾಗೂ ಬ್ರಾಹ್ಮಣೇತರರ ಹೆಗಲ ಮೇಲೆ ಬ್ರಾಹ್ಮಣರು.
ಹೀಗೆ ಈ ಗಡಿಗಳು ಒಂದಕ್ಕೊಂದು ಅಂಟಿಕೊಂಡಿವೆ. ಇಲ್ಲಿ ಪಾಪ ದಲಿತರಿಗೆ ಇಬ್ಬಿಬ್ಬರ ಭಾರ ಸಹಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಬ್ರಾಹ್ಮಣ-ಬ್ರಾಹ್ಮಣೇತರರಲ್ಲಿ ಒಬ್ಬರು ಯಾರಾದರೂ ದಲಿತರ ಹೆಗಲಮೇಲಿಂದ ಕೆಳಗಿಳಿದು ತಮ್ಮ ಕಾಲನಡಿಗೆಯಲ್ಲಿ ದಾರಿ ಕ್ರಮಿಸಿದರೆ ದಲಿತರ ಮೇಲಿರುವ ಎರಡು ಪಟ್ಟು ಭಾರ ಕಡಿಮೆಯಾಗಲ್ಲಿಕ್ಕಿಲ್ಲವೇ? ಯಾರು ಮೊದಲು ಕೆಳಗಿಳಿಯಬೇಕು ಅನ್ನುವುದಕ್ಕೆ ಒಬ್ಬರು ಮತ್ತೊಬ್ಬರ ದಾರಿ ಕಾಯುವ ಅಗತ್ಯವಿಲ್ಲ. ಬ್ರಾಹ್ಮಣರು ಕೆಳಗಿಳಿಯಲು ಸಿದ್ಧರಿಲ್ಲದಿದ್ದರೆ ಬ್ರಾಹ್ಮಣೇತರರಾದರೂ ಕೆಳಗಿಳಿಯುವ ಮಮತೆಯನ್ನು ತೋರಿಸಬೇಡವೇ? ಬ್ರಾಹ್ಮಣ ನಿಲುವಿನಂತಹ ಅಮಂಗಲ ಗಂಗೆಯ ಉಗಮ ಬ್ರಾಹ್ಮಣರಿಂದಲೇ ಆಗಿದೆ ನಿಜ, ಆದರೆ ಉಗಮಸ್ಥಾನದಿಂದ ಆ ಗಂಗೆ ಮುಂದಕ್ಕೆ ಹರಿಯುತ್ತ ಹೋದಂತೆ ಅದರ ಬೆಳೆಯುವ ಹಾಗೂ ಆಳವಾಗುತ್ತ ಹೋಗುವ ಪಾತ್ರದಲ್ಲಿ ಅನೇಕ ಜನ ಮುಳುಗಲಾರಂಭಿಸಿದರೆ ಉಗಮದಲ್ಲಿರುವ ಜನ ಪ್ರವಾಹ ನಿಲ್ಲಿಸುತ್ತಿಲ್ಲ ಅಂದಮಾತ್ರಕ್ಕೆ ಅದರ ಮಧ್ಯದಲ್ಲಿರುವ ಜನ ಕೂಡ ಅಣೆಕಟ್ಟು ಕಟ್ಟುವಂತಿಲ್ಲ ಅನ್ನುವುದಕ್ಕೆ ನ್ಯಾಯ ಅನ್ನಬಹುದೇ? ನಮ್ಮ ಬ್ರಾಹ್ಮಣೇತರ ಬಂಧುಗಳು ಈ ದೃಷ್ಟಿಯಿಂದ ಈ ಪ್ರಶ್ನೆಯ ಬಗ್ಗೆ ಸಾಕಷ್ಟು ಯೋಚಿಸಿಲ್ಲ ಅನ್ನುವುದು ನಮ್ಮ ದೃಷ್ಟಿಯಿಂದ ದುಃಖದ ವಿಷಯ.
ಬ್ರಾಹ್ಮಣೇತರ ಪಕ್ಷದ ತತ್ವದ ವಿರುದ್ಧ ಬ್ರಾಹ್ಮಣೇತರ ಜನರಿಂದೇನಾದರೂ ಕೆಲಸಗಳಾದರೆ ಬ್ರಾಹ್ಮಣರೇ ನಮ್ಮಿಂದ ಇಂತಹ ಕೆಲಸಗಳನ್ನು ಮಾಡಿಸಿ ತಾವು ದೂರ ಸರಿಯುತ್ತಾರೆ ಅನ್ನುವ ಯುಕ್ತಿವಾದಗಳನ್ನು ಬ್ರಾಹ್ಮಣೇತರ ಪಕ್ಷಗಳು ಮಾಡುತ್ತಿರುತ್ತವೆ. ಹೀಗೂ ಆಗುತ್ತಿರಬಹುದು ಎಂದು ನಂಬಲಡ್ಡಿಯಿಲ್ಲ. ಆದರೆ ಯಾವಾಗಲೂ ನಾವು ಬೇರೆಯವರ ಅನುಭವಗಳನ್ನು ನೋಡಿ ಬುದ್ಧಿ ಕಲಿಯುತ್ತೇವೆ. ದುಷ್ಕೃತ್ಯದ ಜವಾಬ್ದಾರಿಯನ್ನು ಅಲ್ಲಗೆಳೆಯುವ ಪ್ರಕಾರ ನಮಗಂತೂ ವಿಚಿತ್ರವಾಗಿ ಕಾಣುತ್ತದೆ. ಯಾವತ್ತೂ ಬೇರೆಯವರತ್ತ ಬೆಟ್ಟು ಮಾಡಿ ತೋರಿಸುತ್ತ, ‘‘ಮಾಡುವ, ಮಾಡಿಸುವವರು ಬ್ರಾಹ್ಮಣರು, ನಾವು ನಿಮಿತ್ತ ಮಾತ್ರ’’ ಎಂದು ಪ್ರತಿಯೊಬ್ಬ ಬ್ರಾಹ್ಮಣೇತರ ಅಪರಾಧಿ ತನ್ನನ್ನು ದೋಷಮುಕ್ತನನ್ನಾಗಿಸಲು ಪ್ರಯತ್ನಿಸಿದರೆ ಸಾಮಾನ್ಯ ಜನ ಅವನನ್ನು ಹುಚ್ಚನೆಂದಾರು. ಆದರೆ ಬ್ರಾಹ್ಮಣೇತರ ಪಕ್ಷಕ್ಕೆ ಹೀಗೆ ಸಬೂಬು ಕೊಟ್ಟು ಅಭ್ಯಾಸವಾಗಿದೆಯೆಂದರೆ ಈ ಅಭ್ಯಾಸಬಲದಿಂದ ಮಹಾರಾಷ್ಟ್ರದ ಒಂದು ದೊಡ್ಡ ಪಕ್ಷ ಕರ್ತವ್ಯದಿಂದ ವಿಮುಖವಾಗುತ್ತಿದೆಯೇನೋ ಅನ್ನುವ ಭಯ ನಮಗೆ ಕಾಡುತ್ತಿದೆ. ಮಹಾಡ್‌ನ ದಂಗೆಗಳ ಬಗ್ಗೆ ಬ್ರಾಹ್ಮಣೇತರ ಪತ್ರಿಕೆಗಳಿಂದ ಆದ ಚರ್ಚೆಗಳನ್ನು ಓದಿದ ಮೇಲಂತೂ ನಮಗೆ ನಿರಾಸೆಯಾಗಿದೆ ಅನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ದಂಗೆಯಲ್ಲಿ ಶೇಟಜಿ, ಭಡಜಿಗಳು ಭಾಗವಹಿಸಿದ್ದರು ಅನ್ನುವ ವಿಷಯವನ್ನು ಪ್ರಸ್ತಾಪಿಸುವುದೇ ಬ್ರಾಹ್ಮಣೇತರ ಪತ್ರಿಕೆಗಳ ಲೇಖನದ ಗುರಿಯಾಗಿತ್ತು. ನಮ್ಮ ದೃಷ್ಟಿಯಲ್ಲಿ ಈ ವಿಷಯಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವೇ ಇರಲಿಲ್ಲ.
ದಂಗೆಯಲ್ಲಿ ಯಾರು ಭಾಗವಹಿಸಿದ್ದರು ಅನ್ನುವ ವಿಷಯ ಮುಖ್ಯವಾಗಿರಲಿಲ್ಲ. ಅದರ ಬಗ್ಗೆ ರಂಪ ಮಾಡುವ ಆಸೆ ಯಾರಿಗಾದರೂ ಇದ್ದರೆ ಇಂದು ಶೇಟಜಿ, ಭಡಜಿಗಳು ಈ ಆರೋಪದಿಂದ ಮುಕ್ತರಾಗಿದ್ದರೂ ಕೂಡ ಈ ದಂಗೆಗಳಲ್ಲವರು ಭಾಗವಹಿಸಿದ್ದರು ಎಂದೇ ನಾವು ಹೇಳುತ್ತೇವೆ. ಈ ನಮ್ಮ ಹೇಳಿಕೆಯಿಂದ ಬ್ರಾಹ್ಮಣೇತರ ಪಕ್ಷಕ್ಕೆ ಸಮಾಧಾನವಾಗುವಂತಿದ್ದರೆ ಬ್ರಾಹ್ಮಣೇತರ ಪಕ್ಷದ ನಿಜವಾದ ಕಾರ್ಯವಾದರೂ ಯಾವುದು? ಅನ್ನುವ ರಹಸ್ಯ ಕಾಡುತ್ತದೆ. ಬ್ರಾಹ್ಮಣ ಜನರು ಬ್ರಾಹ್ಮಣ ನಿಲುವಿನ ನಾಶಕ್ಕಾಗಿ ಮುಂದಾಗುತ್ತಿಲ್ಲವಾದ್ದರಿಂದ ಅವರನ್ನು ನೇಣು ಹಾಕಲು ಮಾತ್ರ ಬ್ರಾಹ್ಮಣೇತರ ಪಕ್ಷದ ಅಗತ್ಯವಿದೆ ಎಂದು ನಮಗೆ ಅನಿಸುತ್ತಿಲ್ಲ. ಇಂದಿನವರೆಗೆ ಬ್ರಾಹ್ಮಣೇತರರಲ್ಲಿಯ ಬ್ರಾಹ್ಮಣ ನಿಲುವನ್ನು ಹೋಗಲಾಡಿಸಲು ಬ್ರಾಹ್ಮಣರು ಸ್ವಲ್ಪವೂ ಪ್ರಯತ್ನಿಸಿಲ್ಲವಾದ್ದರಿಂದ ಅದನ್ನು ಹೋಗಲಾಡಿಸುವ ಜವಾಬ್ದಾರಿಯನ್ನು ಸ್ವತಃ ಬ್ರಾಹ್ಮಣೇತರರೇ ವಹಿಸಿಕೊಳ್ಳಬೇಕು ಅನ್ನುವುದೇ ಬ್ರಾಹ್ಮಣೇತರ ಪಕ್ಷದ ಆಗುಹೋಗುಗಳನ್ನು ನೋಡುತ್ತಿರುತ್ತೇವೆ. ನಮ್ಮ ಬ್ರಾಹ್ಮಣೇತರ ಬಂಧುಗಳು ಈ ವಿಷಯದ ಬಗೆಗಿನ ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಜಾತಿ ಬಾಂಧವರನ್ನು ಈ ದುರಾಚಾರದಿಂದ ದೂರವಿಡುವ ಒಳ್ಳೆಯ ಕಾರ್ಯ ಮಾಡಿಯಾರು ಅನ್ನುವ ಅಪೇಕ್ಷೆ ನಮಗಿತ್ತು. ಆದರೆ ಹಾಗೇನೂ ಮಾಡದೆ ಮಾಡಿದ್ದೆಲ್ಲವೂ ಬ್ರಾಹ್ಮಣರು ನಾವು ಅವರು ಹೇಳಿದಂತೆ ಮಾಡಿದೆವು, ಅನ್ನುವ ತಕರಾರನ್ನು ತಂದಿಟ್ಟು ಸುಮ್ಮನಿದ್ದುಬಿಟ್ಟಿದ್ದಾರೆ.
ಆದರೆ ಈ ಸಬೂಬುಗಳಿಂದ ದಲಿತರಿಗೇನಂತೆ? ಅವರಿಗಂತೂ ವಿಘ್ನ ಎದುರಾಗಿದೆ! ವಿಘ್ನವನ್ನು ತಂದಿಟ್ಟಿರುವುದಂತೂ ನಿಜವಾದರೂ ಅದು ತಮ್ಮ ಬುದ್ಧಿಯಿಂದ ತಂದಿದ್ದಲ್ಲ ಬೇರೆಯವರ ಹೇಳಿಕೆಯಿಂದ ತಂದಿದ್ದ್ದು ಅನ್ನುವ ವಿಷಯ ಕ್ಷುಲ್ಲಕವಾಗುತ್ತದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇಂತಹ ಸಬೂಬುಗಳನ್ನು ಉಪಯೋಗಿಸಬಹುದು. ಆದರೆ ಅದನ್ನೇ ಮುಂದಿಟ್ಟುಕೊಂಡು ದೋಷಮುಕ್ತತೆಯ ಅಪೇಕ್ಷೆಯನ್ನು ನಮ್ಮ ಬ್ರಾಹ್ಮಣೇತರ ಬಂಧುಗಳು ಮಾಡುವುದು ನಮ್ಮ ದೃಷ್ಟಿಯಿಂದ ಅವರ ಸಣ್ಣತನ ತೋರಿಸುತ್ತದೆ.
ಇಷ್ಟೊಂದು ದುಃಖದಲ್ಲಿ ಸುಖ ಒಂದೇ, ಅದೇನೆಂದರೆ ನಮ್ಮ ಗೆಳೆಯರಾದ ಜವಳ್‌ಕರ್ ಹಾಗೂ ಜೇಧೆ ಅನ್ನುವ ಬ್ರಾಹ್ಮಣೇತರ ನೇತಾರರು ‘ಚವದಾರ್’ ಕೆರೆಯ ವಿಷಯದಲ್ಲಿ ಮಹಾಡ್‌ನಲ್ಲಿ ದಲಿತರೊಂದಿಗೆ ಸತ್ಯಾಗ್ರಹ ಮಾಡುವ ಸಿದ್ಧತೆ ತೋರಿಸಿದರು ಅನ್ನುವುದು. ಈ ಆಶ್ವಾಸನೆಯ ಬಗ್ಗೆ ನಾವವರಿಗೆ ಆಭಾರಿಗಳಾಗಿದ್ದೇವೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ವಾರಾಡ್‌ನ ಬ್ರಾಹ್ಮಣೇತರ ಬಂಧುಗಳಿಗೆ ವಿಶೇಷ ಆಭಾರಿಗಳಾಗಿದ್ದೇವೆ. ನಮ್ಮ ಮುಂಬೈ ಬ್ರಾಹ್ಮಣೇತರ ಬಂಧುಗಳಿಗಿಂತ ವರಾಡ್‌ನ ಬ್ರಾಹ್ಮಣೇತರ ಬಂಧುಗಳಿಗೆ ಅಸ್ಪಶ್ಯತೆ ನಿವಾರಣೆಯಲ್ಲಿ ಹೆಚ್ಚು ಆಸ್ಥೆಯಿದೆ ಅನ್ನುವುದನ್ನು ಎರಡೂ ಪ್ರಾಂತ್ಯದ ಬ್ರಾಹ್ಮಣೇತರ ಪಕ್ಷಗಳ ಪತ್ರಿಕೆಗಳನ್ನು ಓದಿದವರಿಗೆ ಹೇಳಬೇಕಿಲ್ಲ.
ಜೇಧೆ ಹಾಗೂ ಜವಳ್‌ಕರ್ ಅವರು ವರಾಡ್‌ಗೆ ಹೋಗದಿದ್ದರೆ ಅವರಿಗೆ ಚಳವಳಿಯಲ್ಲಿ ಭಾಗವಹಿಸುವ ಕಲ್ಪನೆಯೇ ಬರುತ್ತಿರಲಿಲ್ಲ ಅನ್ನುವ ನಂಬಿಕೆ ನಮಗಿದೆ. ಅದೇನೇ ಇರಲಿ, ಬ್ರಾಹ್ಮಣೇತರ ನೇತಾರರು ಈ ಕೆಲಸದಲ್ಲಿ ಸಕ್ರಿಯ ಸಹಾನುಭೂತಿ ತೋರಿಸಲು ಮನಸ್ಸು ಮಾಡಿದ್ದಾರೆ ಅನ್ನುವುದು ಬ್ರಾಹ್ಮಣೇತರ ಚಳವಳಿಗೆ ಭೂಷಣವಾಗಿದೆ. ಮಹಾಡ್‌ನಲ್ಲಿ ಸತ್ಯಾಗ್ರಹ ಮಾಡುವ ನಮ್ಮ ಆಸೆಯನ್ನು ನಾವು ಮೊದಲೇ ತಿಳಿಸಿದ್ದೇವೆ ಅನ್ನುವುದು ನಮ್ಮ ‘ಬಹಿಷ್ಕೃತ ಭಾರತ’ದ ಎರಡನೆಯ ಸಂಚಿಕೆಯ ಅಗ್ರಲೇಖನದಿಂದ ಸ್ಪಷ್ಟವಾಗುತ್ತದೆ. ಈ ಮಾರ್ಗ ಕಠಿಣವಾಗಿದೆ, ಸಾಕಷ್ಟು ತೊಂದರೆಗಳಿಂದ ಕೂಡಿದೆ ಎಂದು ಅನೇಕರು ನಮಗೆ ಹೇಳುತ್ತಿದ್ದಾರೆ. ‘‘ನಾವು ಎಲ್ಲಿಲ್ಲದ ಅವಸರ ಮಾಡುತ್ತಿದ್ದೇವೆ’’, ‘‘ಮೇಲ್ಜಾತಿಯವರ ಪರಂಪರಾಗತವಾದ ಭಾವನೆಗಳಿಗೆ ಬಗ್ಗುತ್ತಿಲ್ಲ’’, ‘‘ಗುರಿ ತಲುಪಲು ವೀರ ಆಂಜನೇಯನ ಅನುಕರಣೆ ಮಾಡಿ ನೂರು ಯೋಜನೆಯನ್ನು ಒಂದೇ ನೆಗೆತದಲ್ಲಿ ಪೂರೈಸುವ ಮಹತ್ವಕಾಂಕ್ಷೆಯ ನ್ನಿಟ್ಟುಕೊಂಡಿದ್ದೇವೆ’’,
‘‘ಎಷ್ಟೋ ವರ್ಷಗಳ ರೂಢಿ ಪರಂಪರೆಗಳ ಜಾತಿಯ ಗೋಡೆಯನ್ನು ಒಮ್ಮೆಲೆ ಸಿಡಿಮದ್ದಿನಿಂದ ಹಾರಿಸುವ ಅಟ್ಟಹಾಸ ಮಾಡುತ್ತಿದ್ದೇವೆ’’ ಅನ್ನುವ ಪ್ರಲಾಪಗಳನ್ನು ಮಾಡುತ್ತ ಕೆಲವು ಮೇಲ್ಜಾತಿಯ ಜನ ನಮ್ಮನ್ನು ಹೆದರಿಸುತ್ತಿದ್ದಾರೆ ಹಾಗೂ ನಮ್ಮ ದೃಢ ನಿರ್ಧಾರದಿಂದ ನಮ್ಮನ್ನು ದೂರವಿರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಇಂತಹ ಬೆದರಿಕೆಗಳಿಗೆ ನಾವು ಬೆಲೆ ಕೊಡುವುದಿಲ್ಲ. ಕೇವಲ ವಾದವಿವಾದ ಹಾಗೂ ಜ್ಞಾನಪ್ರಸಾರದಿಂದ ಅಸ್ಪಶ್ಯತೆ ನಿವಾರಣೆಯಾಗುವ ಭರವಸೆ ನಮಗೆ ಇದ್ದಿದ್ದರೆ ನಾವು ಮೇಲಿನ ಬುದ್ಧಿವಾದವನ್ನು ಬಹುಶಃ ಒಪ್ಪಿಕೊಳ್ಳುತ್ತಿದ್ದೇವೋ ಏನೋ. ಆದರೆ ಶಸ್ತ್ರಪ್ರಯೋಗವಿಲ್ಲದೆ ಕೇವಲ ಸಾಧಾರಣ ಯುಕ್ತಿವಾದ ಇಲ್ಲವೆ ಜ್ಞಾನದ ಮುಲಾಮಿನಿಂದ ಈ ರೋಗ ವಾಸಿಯಾಗುವಂತೆ ಕಾಣುವುದಿಲ್ಲ ಅನ್ನುವ ಅನುಭವವಿರುವಾಗ ಶಸ್ತ್ರ ಉಪಯೋಗಿಸಲು ನಾವು ದೃಢ ನಿರ್ಧಾರ ಮಾಡದಿದ್ದರೆ ಅದು ನಮ್ಮ ನಿಜವಾದ ಕಾರ್ಯಕ್ಷಮತೆಯಾಗದೆ ಮನಸ್ಸಿನ ದುರ್ಬಲತೆಯಾದೀತು ಎಂದು ನಮಗನಿಸುತ್ತದೆ. ಈ ದುರ್ಬಲತೆಯ ಪಾಪ ನಮಗಂಟಿಕೊಳ್ಳುವುದು ಬೇಡ ಎಂದು ನಮ್ಮ ಮನೋದೇವತೆ ನಮಗೆ ಆಜ್ಞಾಪಿಸುತ್ತಿರುವುದರಿಂದ ನಾವು ಆದಷ್ಟು ಬೇಗ ಮತ್ತೊಮ್ಮೆ ಮಹಾಡ್‌ನ ಜವದಾರ್ ಕೆರೆಗೆ ಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಮುಂಬರುವ ಮಹಾಡ್‌ನ ‘ಈ ಸತ್ಯಾಗ್ರಹ ಹೇಗಿರಬೇಕು ಅನ್ನುವ ಬಗ್ಗೆ ಜವಳ್‌ಕರ್ ಹಾಗೂ ಜೇಧೆಯವರು ಹೇಳಿರುವ ಅವರ ವಿಚಾರಗಳನ್ನು (ಪರಿಶಿಷ್ಟ ಕ್ರ.17 ವೀಕ್ಷಿಸಿ; ಅಗ್ರಲೇಖನ ‘ಬಹಿಷ್ಕೃತ ಭಾರತ’, ತಾ. 1 ಜುಲೈ, 1927) ನಾವು ಒಪ್ಪುತ್ತೇವೆ. ಆದರೂ ಒಂದು ಮಹತ್ವದ ವಿಷಯದ ಬಗ್ಗೆ ನಮಗೂ ಅವರಿಗೂ ಮತಭೇದಗಳಿವೆ ಅನ್ನುವುದನ್ನು ಹೇಳುವ ಅಗತ್ಯವಿದೆ.
ಜೇಧೆ ಹಾಗೂ ಜವಳ್‌ಕರ್ ಅವರು ‘ಈ ಸತ್ಯಾಗ್ರಹದಲ್ಲಿ ಯಾವುದೇ ಬ್ರಾಹ್ಮಣರನ್ನು ಸೇರಿಸಿಕೊಳ್ಳಬೇಡಿ’ ಎಂದು ಇಟ್ಟಿರುವ ಶರತ್ತನ್ನು ನಾವು ಎಂದಿಗೂ ಒಪ್ಪಿಕೊಳ್ಳಲಾರೆವು. ನಾವು ಬ್ರಾಹ್ಮಣರ ವಿರುದ್ಧವಿಲ್ಲ ಅನ್ನುವುದನ್ನು ಎಲ್ಲರಿಗೂ ಸ್ಪಷ್ಟವಾಗಿ ತಿಳಿಸಲಿಚ್ಛಿಸುತ್ತೇವೆ. ನಮ್ಮ ದೃಷ್ಟಿ ಕೇವಲ ಬ್ರಾಹ್ಮಣ ನಿಲುವಿನ ಮೇಲಿದೆ. ಬ್ರಾಹ್ಮಣರು ನಮ್ಮ ಶತ್ರುಗಳಲ್ಲ. ಆದರೆ ಬ್ರಾಹ್ಮಣ ನಿಲುವಿನಿಂದ ತುಂಬಿಕೊಂಡಿರುವ ಜನ ನಮ್ಮ ಶತ್ರುಗಳೆಂದು ನಮಗನಿಸುತ್ತದೆ. ಈ ಭಾವನೆಗಳಿಂದಲೇ ಬ್ರಾಹ್ಮಣ ನಿಲುವಿನ ಬ್ರಾಹ್ಮಣೇತರನು ನಮಗೆ ದೂರವೆನಿಸುತ್ತಾನೆ ಹಾಗೂ ಬ್ರಾಹ್ಮಣ ನಿಲುವಿಲ್ಲದ ಬ್ರಾಹ್ಮಣನು ನಮಗೆ ಹತ್ತಿರದವನಾಗುತ್ತಾನೆ. ನಾವು ನಮ್ಮ ಮನಸ್ಸನ್ನು ಈ ರೀತಿ ಇಟ್ಟುಕೊಂಡಿರುವುದರಿಂದಲೇ ನಾವು ಯೋಜಿಸಿರುವ ಸತ್ಯಾಗ್ರಹದಲ್ಲಿ ಎಲ್ಲರಿಗೂ ಪ್ರವೇಶವಿದೆ. ಅದು ಯಾವುದೇ ಜಾತಿಯವನಾಗಿರಲಿ ಬ್ರಾಹ್ಮಣ ನಿಲುವನ್ನು ಇಷ್ಟಪಡದವನೇ ಈ ಪ್ರಯತ್ನದಲ್ಲಿ ಸಹಾಯ ಮಾಡಿಯಾನು. ಇಲ್ಲಿ ಆಯ್ಕೆ ಮಾಡುವ ಅಗತ್ಯ ನಮಗೆ ಕಂಡುಬರುತ್ತಿಲ್ಲ.