ಹಿಂದಿ ಹಾಡಿನ ಮೂಲಕ ಮೋದಿಯನ್ನು ಟೀಕಿಸಿದ ಹಾರ್ದಿಕ್ ಪಟೇಲ್
‘ಐಸೆ ಕಲ್ಯುಗ್ ಆಯೇಗಾ’
ಹೊಸದಿಲ್ಲಿ, ನ.17: 1970ರಲ್ಲಿ ಜನಪ್ರಿಯವಾಗಿದ್ದ ಹಿಂದಿ ಸಿನೆಮ ಹಾಡು ‘ರಾಮಚಂದ್ರ ಕೆಹ್ ಗಯೆ ಸಿಯಾ ಸೆ’ ಎಂಬ ಗೀತೆಯ ಮೂಲಕ ಪಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.
ಹಿಂದಿ ಸಿನೆಮ ‘ಗೋಪಿ’ಯಲ್ಲಿ ಬರುವ ಈ ಹಾಡಿನಲ್ಲಿ ‘ಐಸೆ ಕಲ್ಯುಗ್(ಕಲಿಯುಗ) ಆಯೇಗಾ’ ಎಂಬ ಸಾಲಿದೆ. ಕಲಿಯುಗ ಎಂದರೆ ದುಷ್ಟಶಕ್ತಿಗಳ ಯುಗ ಎಂಬ ಅರ್ಥವೂ ಇರುವ ಹಿನ್ನೆಲೆಯಲ್ಲಿ , ಮೋದಿ ಆಡಳಿತ ‘ಈ ಕಲಿಯುಗ’ವನ್ನು ಸನ್ನಿಹಿತಗೊಳಿಸಿದೆ ಎಂದು ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಹಾಡಿನ ಸಾಲೊಂದರಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಮೋದಿ ಪತ್ನಿ 64ರ ಹರೆಯದ ಜಶೋಧಾ ಬೆನ್ ಅವರನ್ನೂ ಉಲ್ಲೇಖಿಸಿದ್ದಾರೆ . ಗಾಂಧಿ ಹಂತಕ ಗೋಡ್ಸೆ ಸ್ಮರಣಾರ್ಥ ದೇವಸ್ಥಾನವನ್ನೂ ಕಟ್ಟುವ ಕಾಲ ಬಂತೆಂದರೆ ಇದು ಕಲಿಯುಗವೇ ಸರಿ ಎಂದೂ ಹೇಳಲಾಗಿದೆ.
ಗುಜರಾತ್ನಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿಗೆ ಹಾರ್ದಿಕ್ ಪಟೇಲ್ ಮಗ್ಗುಲ ಮುಳ್ಳಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪಟೇಲ್ ಒಳಗೊಂಡಿದ್ದಾರೆ ಎನ್ನಲಾದ ಸೆಕ್ಸ್ ಸಿಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದ್ದು ಈ ಕೃತ್ಯದ ಹಿಂದೆ ಬಿಜೆಪಿ ಕೈವಾಡ ಇರುವುದಾಗಿ ಪಟೇಲ್ ಆರೋಪಿಸಿದ್ದಾರೆ.
ಗುಜರಾತ್ನ ಮತದಾರರು 22ರ ಯುವಕ ಒಳಗೊಂಡಿರುವ ಸಿಡಿಯನ್ನು ನೋಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಳೆದ 22 ವರ್ಷಗಳಲ್ಲಿ ಯಾವುದಾದರೂ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಆ ಕುರಿತಾದ ಸಿಡಿಯನ್ನು ಜನತೆ ನೋಡಲು ಬಯಸುತ್ತಿದ್ದಾರೆ ಎಂದು ಹಾರ್ದಿಕ್ ಟಾಂಗ್ ನೀಡಿದ್ದಾರೆ.